ಬೆಕೆಟ್ ನ  Waiting for Godot ದ ಅಭೂತಪೂರ್ವ ಯಶಸ್ಸು  ಅದುವರೆಗೆ ನಾಟಕ  ರಚನೆಯ  ಬಗ್ಗೆ  ಇದ್ದ ಅನೇಕ ಮೂಲಭೂತ ನಂಬಿಕೆಗಳನ್ನು   ಪ್ರಶ್ನಿಸುವಂತೆ ಮಾಡಿತು. Waiting for Godot ಕಾಯುವಿಕೆಯಂಥ ಅಮೂರ್ತ ವಿಷಯವನ್ನು  ಕೈಗೆತ್ತಿಕೊಂಡಿತ್ತು. ಸಾಮಾನ್ಯವಾಗಿ ಅಲ್ಲಿಯವರೆಗೆ ನಾಟಕಗಳಲ್ಲಿ ಕಥೆ, ಹಂತ ಹಂತವಾದ ಅದರ ಏಕಮುಖ ಬೆಳವಣಿಗೆ, ಕಥೆಯ ನಿರ್ದಿಷ್ಟ ಅಂತ್ಯ, ನಾಯಕ, ನಾಯಕಿ, ಇವೆಲ್ಲ ನಾಟಕದ ಗೆಲುವಿಗೆ ಅಗತ್ಯ ಎಂಬ ನಂಬಿಕೆ ಇತ್ತು.  ನಾಟಕ ನೋಡಲು ಬರುವ ಪ್ರೇಕ್ಷಕರು ಈ ರೀತಿಯ ಅಪೇಕ್ಷೆ ಇಟ್ಟುಕೊಂಡೇ ಬರುತ್ತಿದ್ದರು. ಆದರೆ ಬೆಕೆಟ್ ನ ಈ ನಾಟಕದಲ್ಲಿ ಕಥೆಯೇ ಇರಲಿಲ್ಲ. ನಾಟಕದಲ್ಲಿ ನಾಯಕ, ನಾಯಕಿ ಅಥವಾ ನಿರ್ದಿಷ್ಟ ಅಂತ್ಯ ಇವಾವೂ ಇರಲಿಲ್ಲ.
Read More

Felini812“ಹೆಸರಾಂತ ನಿರ್ದೇಶಕ ಗಿಡೋ ಇದುವರೆಗೆ ನಿರ್ದೇಶಿಸಿದ ಚಿತ್ರಗಳ ಸಂಖ್ಯೆ ಎಂಟೂವರೆ. ಒಟ್ಟಾರೆ ಏಳು ಚಿತ್ರಗಳಿಗೆ ಸ್ವತಂತ್ರ ನಿರ್ದೇಶಕ ಮತ್ತು ಮೂರು ಚಿತ್ರಗಳಿಗೆ ಸಹಾಯಕ ನಿರ್ದೇಶಕನಾದ್ದರಿಂದ ಅವನ ಲೆಕ್ಕದಲ್ಲಿ ಎಂಟೂವರೆ ಚಿತ್ರಗಳು. ಮುಂದಿನ ಚಿತ್ರದ ತಯಾರಿ ಮಾಡಬೇಕು ಅಂತ ಅವನಿಗೆ ಅನ್ನಿಸಿದೆ. ಆದರೆ ಯಾಕೋ ಇತ್ತೀಚಿಗೆ ಏನೂ ಸರಿಯಾಗಿ ಯೋಚಿಸಲಾಗುತ್ತಿಲ್ಲ. ಯಾವ ಕಥೆ ಅಥವಾ ವಿಷಯ ಸರಿಹೊಂದೀತು ಅಂತ ಯೋಚಿಸಿವುದಕ್ಕೆ ಶುರುಮಾಡಿದ ತಕ್ಷಣ ತಲೆಯೆಲ್ಲ ಖಾಲಿ ಆದಂತೆ ಅನಿಸಿ ಏನೂ ನಿರ್ಧಾರಕ್ಕೆ ಬರಲಾಗುತ್ತಿಲ್ಲ. ತನ್ನ ಬಳಿ ಹೇಳುವುದಕ್ಕೆ ಹೊಸದೇನೂ ಈಗ ಇಲ್ಲ ಎಂಬ ದಟ್ಟ ಭಾವನೆ ಬೆಳೆಯತೊಡಗಿತು.  ಹೀಗೆಯೇ ಒಂದು ದಿನ ಕಾರ್ ಡ್ರೈವ್ ಮಾಡುತ್ತಾ ಇದ್ದಾಗ ತನ್ನ ಸೃಜನಶೀಲತೆಯೆಲ್ಲ ಸೋರಿ ಹೋದ ಬಗ್ಗೆ ಚಿಂತಿಸುತ್ತಾ ಕಾರನ್ನು ಗಕ್ಕನೆ ನಡುರಸ್ತೆಯಲ್ಲಿ ನಿಲ್ಲಿಸಿಬಿಟ್ಟ. ಇದರಿಂದ ಟ್ರಾಫಿಕ್ ಜಾಮ್ ಆಗಿ ಅವನ ಸುತ್ತಲೂ ಕಾರುಗಳ ಸಂತೆಯೇ ನೆರೆಯಿತು. ಮೈಯೆಲ್ಲಾ ಬೆವೆತು ಅವನ ಧ್ವನಿಯೇ ಉಡುಗಿತ್ತು. ತನ್ನ ಇರುವಿಕೆಯೇ ಇಲ್ಲದಂತಾಗಿ ಗಾಳಿಯಲ್ಲಿ ತೇಲಾಡಲಾರಂಭಿಸಿದ. ಮೇಲೆ ಮೇಲೆ ಎತ್ತರಕ್ಕೆ ಹಾರುತ್ತ ಇದ್ದ ಪತಂಗ(ಗಾಳೀಪಟ)ದ  ಹಾಗೆ. ಕೊನೆಗೆ ಯಾರೋ  ಹಗ್ಗದಿಂದ ಎಳೆದಂತಾಗಿ ಕತ್ತರಿಸಿ ಕೆಳಗೆ ಸಮುದ್ರಕ್ಕೆ ಬೀಳತೊಡಗಿದ. ಕೆಳಕ್ಕೆ… ಆಳಕ್ಕೆ.”
Read More

20100515_8_1_bw

ಕ್ಯಾಮೆರಾ ಕೊರಳಿಗೆ ಜೋತಾಡಿಸಿ ಸ್ಯಾಂಡಿಯೇಗೋ ಬಂದರಿನ ಮೇಲೆ ನಡೆಯುತ್ತಿದ್ದೆ. ಮಧ್ಯಾನ್ಹದ ಹೊತ್ತು ಸೂರ್ಯ ನೆತ್ತಿಯ ಮೇಲೆ ಬಂದಿದ್ದ. ಆಗಾಗ ಬಿರುಸು ಗಾಳಿ ಬೀಸಿ ಬಂದರಿನಲ್ಲಿ ಲಂಗರು ಹಾಕಿ ನಿಂತಿದ್ದ  ಬೇರೆ ಬೇರೆ ಬಣ್ಣದ ದೋಣಿಗಳನ್ನು ಮೆಲ್ಲಗೆ ಅಲ್ಲಾಡಿಸುತ್ತಿತ್ತು. ಸಮುದ್ರದ ನೀರಿನಲ್ಲಿ ಬಣ್ಣದ ಓಕುಳಿ.

ಬಂದರಿನ ಒಂದು ಅಂಚಿನಲ್ಲಿ ದೊಡ್ಡ ಬಂಡೆಗಳ ಮೇಲೆ ಒಬ್ಬ ಮೀನಿಗೆ ಗಾಳ ಹಾಕಿ ಕೂತಿದ್ದ. ಬಂದರಿನ ಇನ್ನೊಂದು ಅಂಚಿಗೆ ಒಂದಿಷ್ಟು ಮನೆ ಮಠವಿಲ್ಲದ ನಿರ್ಗತಿಕರು ಶಾಪಿಂಗ್ ನ ತಳ್ಳುಗಾಡಿಯಲ್ಲಿ ತಮ್ಮ ಸಾಮಾನುಗಳ ಗಂಟುಗಳನ್ನು ಇಟ್ಟುಕೊಂಡು ಅತ್ತ ಇತ್ತ ಅಡ್ಡಾಡುತ್ತಿದ್ದರು. ಬಂದರಿನ ಮೇಲೆ ಹಲವಾರು ಮೀನಿನ ನೈಲಾನ್ ಬಲೆಗಳು ಸುತ್ತಲೂ ಬಿದ್ದಿದ್ದವು. ಸಮುದ್ರದಲ್ಲಿ ನಿಂತಿದ್ದ ಒಂದೆರಡು ದೋಣಿಗಳು ಪಯಣದ ಸಿದ್ಧತೆಗೆ ತೊಡಗಿದಂತೆ ಇತ್ತು. ಹತ್ತಿರದಲ್ಲೇ ಇದ್ದ ಮೀನಿನ ಮಾರುಕಟ್ಟೆಯಿಂದ ಗಾಳಿ ಬೀಸಿದಾಗ ಮೀನಿನ ವಾಸನೆ ಬರುತ್ತಿತ್ತು.

ಹಡಗುಕಟ್ಟೆಯಿಂದ ಸ್ವಲ್ಪ ದೂರದಲ್ಲಿ ಕಿಟಕಿಯೊಂದು ತಾನೇ ನಿಂತಿತ್ತು. ಅದರ ಎದುರಿಗೆ ಒಂದು ಹರಿದ ಜಮಖಾನೆ ಹಾಸಿತ್ತು. ಪಕ್ಕದಲ್ಲಿ ಸಿಮೆಂಟಿನ ಬೆಂಚು. ಬೆಂಚಿನ ಎದುರುಗಡೆ ತುಂಬಿದ ಒಂದು ಶಾಪಿಂಗ್ ತಳ್ಳುಗಾಡಿ. ಅದರ ಯಜಮಾನ ಹತ್ತಿರದಲ್ಲಿ ಕಾಣಲಿಲ್ಲ. ಸಧ್ಯಕ್ಕೆ ಬೆಂಚಿನ ಮೇಲೆ ದಷ್ಟ ಪುಷ್ಟ ಕಾಗೆಯೊಂದು ಕುಳಿತಿತ್ತು. ಇದೆಲ್ಲದರ ಪರಿವೆಯೇ ಇಲ್ಲದೆಯೇ ಕಿಟಕಿ ಸಮುದ್ರಕ್ಕೆ ಮತ್ತು ಬಂದರಿಗೆ  ಚೌಕಟ್ಟು ಹಾಕಿ ಇಬ್ಬದಿಯ ಜಗತ್ತಿಗೆಲ್ಲ ತೋರಿಸುತ್ತಿತ್ತು. ಒಳಹೊರಗನ್ನು ಒಂದು ಮಾಡುತಿತ್ತು. ನಾನು ನನ್ನ ಕ್ಯಾಮೆರಾದೊಡನೆ ಚೌಕಟ್ಟಿನೊಳಗಿನ ಒಂದು ಬದಿಯ ದೃಶ್ಯಕ್ಕೆ ಪ್ರೇಕ್ಷಕನಾದೆ.

ಸ್ವಲ್ಪ ಹೊತ್ತಿನ ನಂತರ ತಳ್ಳುಗಾಡಿಯ ಮನೆ ಮಠ ಇಲ್ಲದ ಗಡ್ಡ ಬಿಟ್ಟ ಯಜಮಾನ ಬರುವುದು ಕಾಣಿಸಿತು.  ನಾನು ದಾಪುಗಾಲು ಹಾಕುತ್ತ ದೋಣಿಗಳಿರುವಲ್ಲಿ ನಡೆದೆ ಮತ್ತೊಂದು ಫ್ರೇಮ್ ನ ಹುಡುಕಾಟದಲ್ಲಿ.

ಎಲೆಕ್ಟ್ರಿಕ್ ಕಂಬ ಮತ್ತು ಅದರಿಂದ ಎಳೆದ ತಂತಿಗಳು ಶುಭ್ರ ಆಕಾಶದ ಹಿನ್ನೆಲೆಯಲ್ಲಿ ಮೂಡಿಸಿದ ರೇಖಾಚಿತ್ರ. ಕಪ್ಪು ಶಾಯಿಇಂದ ಮೂಡಿಸಿದ ಸ್ಕೆಚ್ ನ ಹಾಗೆ.

20120106_0307

ದೊಡ್ಡ ಎಲೆಕ್ಟ್ರಿಕ್ ಕಂಬದ ಹಿಂದೆ ನಿಧಾನಕ್ಕೆ ಈ ಹುಣ್ಣಿಮೆಯ ಚಂದ್ರ ಮೇಲೇರುತ್ತಿದ್ದ. ಛಾಯಾಚಿತ್ರವನ್ನ ಕ್ಯಾಮೆರಾದಲ್ಲಿ ಹಿಡಿದಾಗ ನನಗೆ ಚಿತ್ರದ ವಿನ್ಯಾಸದ ಬಗ್ಗೆ ಅಷ್ಟೊಂದು ಭರವಸೆ ಮೂಡಿರಲಿಲ್ಲ. ಆದರೆ ಅನಂತರ ಚಿತ್ರವನ್ನ ಕಂಪ್ಯೂಟರ್ ನಲ್ಲಿ ನೋಡಿದಾಗ ಪರವಾಗಿಲ್ಲ ಎನಿಸಿತು. ಸರಳುಗಳ ಹಿಂದೆ ಇರುವ ಚಂದ್ರ ಚಿತ್ರದ ಆಕರ್ಷಣೆಯ ಕೇಂದ್ರಬಿಂದು. ಆದರೆ ಎಲೆಕ್ಟ್ರಿಕ್ ಕಂಬದ ಸರಳುಗಳು ಮೂಡಿಸುವ ಕಪ್ಪು ಗೆರೆಗಳು ಚಿತ್ರಕ್ಕೆ ಅಷ್ಟೇ ಮುಖ್ಯವಾಗಿವೆ ಎಂದು ನನ್ನ ಅನಿಸಿಕೆ. ಅವು ಚಿತ್ರದ ಚೌಕಟ್ಟನ್ನು ವಿವಿಧ ಪ್ರಮಾಣದ ತ್ರಿಕೋಣ ಮತ್ತು ಚೌಕಾಕಾರಗಳಲ್ಲಿ ವಿಭಾಗಿಸಿ ಚಿತ್ರಕ್ಕೆ ಅಮೂರ್ತತೆಯ (abstractness) ಛಾಯೆಯನ್ನ ನೀಡುತ್ತವೆ. ಚಂದ್ರನೊಂದಿಗೆ ಸ್ಪರ್ಧಿಸುತ್ತ ನೋಡುವವರ ಗಮನ ಸೆಳೆಯಲು ಪ್ರಯತ್ನಿಸುತ್ತವೆ.

ಇಸ್ವಿ ೧೯೫೭. ನವೆಂಬರ್ ತಿಂಗಳು. ಸ್ಯಾನ್ ಕ್ವೆಂಟ್ಇನ್ ಕಾರಾಗ್ರಹದಲ್ಲಿನ ಅಂದಿನ ಕೈದಿಗಳಿಗೆ ಆಧುನಿಕ ನಾಟಕ ಜಗತ್ತಿನ ಅಭಿಮಾನಿಗಳು ಋಣಿಯಾಗಿರಬೇಕಾದ್ದು ಬಹಳ ಆವಶ್ಯಕ ಎನಿಸುತ್ತದೆ. ನಡೆದದ್ದು ಸಾಮಾನ್ಯ ಘಟನೆಯೇ ಆದರೂ ಅಸಾಮಾನ್ಯ ಇರಲಿಕ್ಕೂ ಇರಬಹುದು ಎಂದು ಹಲವರ ಅನಿಸಿಕೆ.

ಸ್ಯಾನ್ ಫ್ರಾನ್ಸಿಸ್ಕೋ ದ ನಾಟಕ ತಂಡವೊಂದು ಅಂದು ಸಂಜೆ ಸೆರೆಮನೆಯ ಕೈದಿಗಳಿಗೆ ನಾಟಕ ಪ್ರದರ್ಶನಕ್ಕೆಂದು ಸಿದ್ಧತೆ ಮಾಡಿಕೊಳ್ಳುತ್ತಿತ್ತು. ಪರಿಸ್ಥಿತಿ ಬಹಳ ಚಿಂತಾಜನಕವಾಗಿತ್ತು. ಇಡೀ ತಂಡವೇ ಆತಂಕಗೊಂಡಿತ್ತು. ಪ್ರೇಕ್ಷಕ ವರ್ಗ ಅಸಾಮಾನ್ಯವಾಗಿತ್ತು.

ನುಸುಗತ್ತಲೆಯ ಮುಸುಕು ಆವರಿಸುತ್ತಿತ್ತು. ಸಂಜೆಯ ಹವೆ ಹಿತವಾಗಿತ್ತು. ಕೈದಿಗಳು ತಮ್ಮ ಮನರಂಜನೆಗಾಗಿ ಕಾಯುತ್ತಿದ್ದರು. ನಾಟಕದ ನಿರ್ದೇಶಕರು ರಂಗದ ಮೇಲೆ ಬಂದು ನಾಟಕದ ಸಿದ್ಧತೆಯ ಬಗ್ಗೆ ಮಾತನಾಡತೊಡಗಿದರು. ನುಸುಗತ್ತಲಲ್ಲಿ ನೂರಾರು ಉರಿಯುವ ಸಿಗರೇಟಿನ ತುದಿಗಳು ಅಲುಗಾಡುತಿದ್ದದ್ದು ಕಾಣುತಿತ್ತು. ಕೈದಿಗಳ ಸಹನೆಯ ಪರೀಕ್ಷೆ ಆಗುತ್ತಿತ್ತು. ಮಾತು ಮುಗಿಸಿ ಸ್ವಲ್ಪ ಸಮಯದ ನಂತರ ನಿರ್ದೇಶಕರು ಹಿಂದೆ ಸರಿದರು. ಅಂಕಪರದೆ ಮೇಲೆದ್ದಿತು. ಮಾತುಗಳಿಗೆ ವಿರಾಮ ಬಿತ್ತು.

Read More

Design a site like this with WordPress.com
ಪ್ರಾರಂಭಿಸಿ