401651455_640

 

ಇದು ಯುಜೀನ್ ಅಯೊನೆಸ್ಕೊ ನ ನಾಟಕ.  ಯುರೋಪಿನ ಅಸಂಗತ (Absurd) ನಾಟಕ ಸಾಹಿತ್ಯದ ಪ್ರಮುಖ ಕೊಡುಗೆಗಳಲ್ಲಿ ಒಂದು.

ಒಬ್ಬ ಮುದುಕ ಮತ್ತು ಮುದುಕಿ ಈ ನಾಟಕದ ಪ್ರಮುಖ ಪಾತ್ರಧಾರಿಗಳು. ಪರದೆ ಸರಿದಾಗ  ರಂಗದ ಮೇಲೆ ಅರ್ಧ ವರ್ತುಲ ಆಕಾರದ ಅನೇಕ  ಸಾಲುಗಳಲ್ಲಿ  ಕುರ್ಚಿಗಳನ್ನು ಜೋಡಿಸಿ ಇಡಲಾಗಿದೆ. ಕುರ್ಚಿಗಳ ಬೆನ್ನು  ಪ್ರೇಕ್ಷಕರ ಕಡೆ ಇದೆ.  ರಂಗದ ಹಿಂದಿನ ಭಾಗದಲ್ಲಿ ಎತ್ತರದ ವೇದಿಕೆಯ ಮೇಲೆ  ಒಂದು ದೊಡ್ಡ  ಕುರ್ಚಿ ಮತ್ತು  ಭಾಷಣ ಮಾಡಲು ಒಂದು  ಧ್ವನಿವರ್ಧಕವನ್ನು  ಇಡಲಾಗಿದೆ.    ಒಬ್ಬ  ಮುದುಕ ಮತ್ತು ಮುದುಕಿ ಸಡಗರದಿಂದ ಕುರ್ಚಿಗಳನ್ನು  ಅತ್ತಿತ್ತ ಸರಿದಾಡಿಸುತ್ತ ಓಡಾಡುತ್ತಿದ್ದಾರೆ. ಕಾಣದ ಅತಿಥಿಗಳನ್ನು ಬರಮಾಡಿಕೊಳ್ಳುತ್ತಿದ್ದಾರೆ. ಅವರೊಡನೆ ಅಕ್ಕರೆಯಿಂದ ಮಾತನಾಡಿಸುತ್ತ ಕುಳ್ಳಿರಿಸುತ್ತಿದ್ದಾರೆ. ಅತಿಥಿಗಳೊಡನೆ ತಮ್ಮ ಗತ ಜೀವನದ ಸವಿ ಘಳಿಗೆಗಳನ್ನು ನೆನಪಿಸಿಕೊಳ್ಳುತ್ತ ಇದ್ದಾರೆ. ಎಲ್ಲರೂ ಸಭೆಯ ಅಧ್ಯಕ್ಷರಿಗಾಗಿ ಕಾಯುತ್ತ ಇದ್ದಾರೆ.

ಮುದುಕ ಸಭೆಗೆ  “ಎಲ್ಲರನ್ನೂ” (ಸಮಸ್ತ ಜಗತ್ತನ್ನು ?) ಅಹ್ವಾನಿಸಿದ್ದಾನೆ. ಸಭೆಯ ಅಧ್ಯಕ್ಷರು ಮುದುಕ  ತನ್ನ ಇದುವರೆಗಿನ ಬಾಳಿನಲ್ಲಿ ಕಂಡುಕೊಂಡ ಅಮೂಲ್ಯ “ಸತ್ಯ” ವೊಂದನ್ನು  ಸಭೆಗೆ ತಿಳಿಸಲಿದ್ದಾರೆ. ಎಲ್ಲ ಕಾಣದ ಅತಿಥಿಗಳ ನಡುವೆ ರಾಜ್ಯದ “ಮಹಾಪ್ರಭು” ಗಳೂ ಕೂಡ ಆಗಮಿಸುತ್ತಾರೆ. ಇದರಿಂದ ಮುದುಕ ಮುದುಕಿಯರಿಗಾದ ಆನಂದ ಹೇಳತೀರದು. ಮಾತುಗಳಿಂದ ಪ್ರೇಕ್ಷಕರೊಡನೆ ಸಂಭ್ರಮವನ್ನು  ಹಂಚಿಕೊಳ್ಳುತ್ತ ಇದ್ದಾರೆ. ಕೊನೆಗೆ  ಸಭೆಯ ಅಧ್ಯಕ್ಷರು ಆಗಮಿಸುತ್ತಾರೆ. ಪ್ರೇಕ್ಷಕರಿಗೆ ಅಧ್ಯಕ್ಷರು ಕಾಣುತ್ತಿದ್ದಾರೆ. ಕಾಣದ ಅತಿಥಿಗಳೆಲ್ಲರೂ ಎದ್ದು ನಿಂತು ಅವರನ್ನು ಸ್ವಾಗತಿಸುತ್ತಿರುವಂತೆ ಅಧ್ಯಕ್ಷರು ರಂಗದ ಮೇಲೆ ಇರುವ ವೇದಿಕೆಯ ಮೇಲೆ ನಿಂತುಕೊಳ್ಳುತ್ತಾರೆ. ಧ್ವನಿಯನ್ನ ಸರಿಪಡಿಸಿಕೊಳ್ಳುತ್ತಾರೆ.

ಈಗ ಮುದುಕ ಮುದುಕಿಯರಿಗೆ ಉತ್ಕಟ  ಸುಖದ ಅನುಭವದಿಂದ ಕಣ್ಣುಗಳಲ್ಲಿ ಆನಂದಾಶ್ರುಗಳು. ಮುದುಕ ಪ್ರೇಕ್ಷಕರಿಗೆ ಹೇಳುತ್ತಾನೆ “ಇದು ನನ್ನ ಇಡಿಯ ಜೀವನದ ಅತ್ಯಂತ ಮಧುರ ಸುಖದ ಅಭಿಮಾನದ ಕ್ಷಣ.  ನಾನು ಕಂಡುಕೊಂಡ  ಜೀವನದ ಅಮೂಲ್ಯ  ಸತ್ಯ ಈಗ ಅಧ್ಯಕ್ಷರಿಂದ ಇಡಿಯ ಜಗತ್ತಿಗೆ ಸಾರಲ್ಪಡುತ್ತದೆ.  ಹಿಂದೆ ಮತ್ತು ಇನ್ನು ಮುಂದೆ ನನ್ನ ಜೀವನದಲ್ಲಿ ಬರುವ ಉಳಿದೆಲ್ಲ ಕ್ಷಣಗಳು ಇಷ್ಟು ಆನಂದವನ್ನು ತರುವುದಕ್ಕೆ ಅಸಾಧ್ಯ.  ಏನಿದ್ದರೂ ಅದು ಈ ಕ್ಷಣಕ್ಕಿಂತ ಕಡಿಮೆ ಆನಂದದಾಯಕವೇ ಆಗಿರುತ್ತದೆ.  ಆದ್ದರಿಂದ ಅಂತಹ ಜೀವನನ್ನು ಏಕೆ ಜೀವಿಸಬೇಕು?”  ಮುದುಕ ಮುದುಕಿಯರಿಬ್ಬರೂ ರಂಗದ sidewing ಗೆ ಹೋಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. “ಸತ್ಯ” ಹೊರಕ್ಕೆ  ಬರುವುದೇ ಇಲ್ಲ.

ಕ್ರಮೇಣ ಕಾಣದ ಅತಿಥಿಗಳೆಲ್ಲರೂ ಒಬ್ಬೊಬ್ಬರಾಗಿ ನಿರ್ಗಮಿಸುವ ಸದ್ದು.  ಕಾಣುವ ಅಧ್ಯಕ್ಷರೂ ನಿರ್ಗಮಿಸುತ್ತಾರೆ. ನಿಧಾನವಾಗಿ ರಂಗದ ಮೇಲೆ ಕತ್ತಲಾಗುತ್ತದೆ. ನಿಶ್ಯಬ್ದವಾಗುತ್ತದೆ. ಪರದೆ ಮುಚ್ಚುತ್ತದೆ.

ಸದಾಶಿವ

ನಾಟಕದಲ್ಲಿ ಕಾಣದ ಅತಿಥಿಗಳು ಏನನ್ನು ಸೂಚಿಸುತ್ತದೆ? ನಿಮ್ಮ ಅನಿಸಿಕೆ ಏನು?

 

Jerzy Grotowski ನಾಟಕಗಳಿಗೆ ಹೊಸ ದಿಶೆಯನ್ನು ಪ್ರತಿಪಾದಿಸಿದ ನಾಟಕ ನಿರ್ದೇಶಕರಲ್ಲಿ ಒಬ್ಬ. ಪೋಲಂಡಿನವ. ತನ್ನ ನಾಟಕ ತಂಡವನ್ನು ನಾಟಕದ ಪ್ರಯೋಗಶಾಲೆ (lab) ಎಂದು ಕರೆದವ.

ಸಂಸ್ಕೃತ ನಾಟಕಗಳಿಂದ, ಗ್ರೀಕ್ ದುರಂತ ನಾಟಕಗಳಿಂದ ಸಮಕಾಲೀನ ನಾಟಕಗಳವರೆಗಿನ ಬೆಳವಣಿಗೆಯ ಹಾದಿಯಲ್ಲಿ ನಾಟಕಕ್ಕೆ ಅನೇಕ art elements ಗಳನ್ನು ಜೋಡಿಸಲಾಗಿತ್ತು. ಬೆಳಕಿನ ಸಂಯೋಜನೆ, ಮುದ್ರಿತ ಧ್ವನಿಗಳು, ಥಳಥಳಿಸುವ ಉಡುಪು, ನೈಜತೆಯನ್ನು ನಕಲು ಮಾಡುವ ರಂಗಸಜ್ಜಿಕೆ ಇತ್ಯಾದಿಗಳಿಂದಾಗಿ ನಾಟಕಗಳಲ್ಲಿ ತಂತ್ರ ತುಂಬಾ ದೊಡ್ಡದಾಗಿ ನಾಟಕದ ಸಾರವನ್ನೇ (essence) ಮರೆಮಾಚಲು ತೊಡಗಿತ್ತು. Broadway ಮಾದರಿಯ ರಂಗ ಪ್ರಯೋಗಗಳು ಈ ರೀತಿಯ ಜಟಿಲ ತಂತ್ರವನ್ನು ಅಳವಡಿಸಿಕೊಂಡು ಸಿನಿಮಾಗಳ ದೃಶ್ಯ ಅನುಭವವನ್ನು ಪ್ರೇಕ್ಷಕರಿಗೆ ನೀಡುವ ಪ್ರಯತ್ನದಲ್ಲಿ ಇದ್ದವು. ನಾಟಕದ ಮೂಲ ಸಾರದಿಂದ ಬಹುದೂರ ಸಾಗಿಬಿಟ್ಟಿದ್ದವು.

Grotowski ಸಮಕಾಲೀನ ನಾಟಕಗಳಲ್ಲಿ ಉಪಯೋಗಿಸುವ ಎಲ್ಲ ತಂತ್ರಗಳ ಮತ್ತು art elementsಗಳ ಅವಶ್ಯಕತೆಯನ್ನು ವಿಶ್ಲೇಷಿಸಿದ. ಯಾವುದಿಲ್ಲದೇ ನಾಟಕವೆನ್ನುವದು “ನಾಟಕ” ಎನಿಸಲಾರದು? ಈ ಪ್ರಶ್ನೆಯನ್ನು Grotowski ನಿರಂತರವಾಗಿ ತನ್ನ ನಾಟಕಗಳ ಮೂಲಕ ಪ್ರೇಕ್ಷಕರ ಎದುರಿಗೆ ಇಡುತ್ತಿದ್ದ. ಯಾವುದಿಲ್ಲದೇ ನಾಟಕ ನಡೆಯುವದಿಲ್ಲವೋ ಅದು ಮಾತ್ರ ನಾಟಕದ ಸಾರ, ಉಳಿದೆಲ್ಲವೂ ಕೇವಲ ಅಲಂಕಾರ ಎನ್ನುವುದೇ ಅವನ ಅನಿಸಿಕೆಯಾಗಿತ್ತು. ಅನೇಕ ವರ್ಷಗಳ ಸಂಶೋಧನೆಯ ನಂತರ ಅವನು ಕಂಡುಕೊಂಡಿದ್ದೇನೆಂದರೆ ನಾಟಕಗಳಿಗೆ ಅವಶ್ಯಕವಾದದ್ದು ಮೂರು: ಅಭಿನಯಿಸುವ ನಟರು, ನೋಡುವ ಪ್ರೇಕ್ಷಕರು ಮತ್ತು dramatic space. ಈ ಮೂರರ ಸಂಕ್ರಮಣದಿಂದ ನಾಟಕ ಆಗುತ್ತದೆ. ಇವುಗಳಲ್ಲಿ ಒಂದರ ಲೋಪವಾದರೂ ನಾಟಕ ಆಗದು. ಉಳಿದೆಲ್ಲವೂ ಅನವಶ್ಯಕ ಮತ್ತು ಕೇವಲ ಅಲಂಕಾರ ಮಾತ್ರ.

dramatic space ಅಭಿನಯಿಸುವ ನಟ ಮತ್ತು ನೋಡುವ ಪ್ರೇಕ್ಷಕರ ನಡುವೆ ಇರುವ ಸಂಬಂಧಕ್ಕೆ ನಿಶ್ಚಿತ ರೂಪ ನೀಡುತ್ತದೆ. dramatic space ನ ಗಡಿ (boundary) ನಾಟಕಕ್ಕೆ ಅನುಗುಣವಾಗಿ ರೂಪಿಸುವ ಕೆಲಸ ನಿರ್ದೇಶಕನದು. ಈ ಗಡಿ ನಾಟಕದಿಂದ ನಾಟಕಕ್ಕೆ ಬೇರೆ ಆಗಿರುವುದು. ಆದ್ದರಿಂದ Grotowski ತನ್ನ ನಾಟಕಗಳ ಪ್ರದರ್ಶನಕ್ಕೆ ರಂಗ ಮಂದಿರಗಳನ್ನು ಯಾವತ್ತೂ ಆರಿಸಿಕೊಳ್ಳುತ್ತಿರಲಿಲ್ಲ. ಯಾಕೆಂದರೆ ರಂಗಮಂದಿರಗಳಲ್ಲಿ dramatic space (ರಂಗ ಮಂಚ ಮತ್ತು ಅದರ ಸುತ್ತಲೂ ಇರುವ ಜಾಗ)ನಲ್ಲಿ ಯಾವ ಬದಲಾವಣೆಯನ್ನೂ ಮಾಡಲಿಕ್ಕಾಗದು. ಬದಲಾಗಿ ಆತ ಒಂದು ದೊಡ್ಡ ಹಾಲ್ ಅಥವಾ amphitheatreನ್ನು ಆರಿಸಿಕೊಳ್ಳುತ್ತಿದ್ದ. ಅಲ್ಲಿ ಅವನಿಗೆ dramatic space ನ ಗಡಿಗಳನ್ನು ನಿರ್ಧರಿಸಲು ಸಂಪೂರ್ಣ ಸ್ವಾತಂತ್ರ್ಯ ಇರುತ್ತಿತ್ತು.

Dramatic Space

Dramatic Space

ಆತ ನಿರ್ದೇಶಿಸಿದ ಕಾಳಿದಾಸನ “ಶಾಕುಂತಲ” ನಾಟಕ ಪ್ರಯೋಗದಲ್ಲಿ dramatic space ಗೆ ನಿಶ್ಚಿತವಾದ ರೂಪ ಇಲ್ಲ. ನಟರು ಪ್ರೇಕ್ಷಕರ ಮಧ್ಯೆ ಇರುತ್ತಾರೆ ಮತ್ತು ಪ್ರೇಕ್ಷಕರೊಡನೆ ಸಂಭಾಷಿಸುತ್ತಾರೆ. ನಾಟಕ ದೊಡ್ಡ ಹಾಲ್ ಒಂದರಲ್ಲಿ ವಿವಿಧ ಜಾಗಗಳಲ್ಲಿ ಅನಾವರಣಗೊಳ್ಳುತ್ತಾ ಹೋಗುತ್ತದೆ. ಸೂತ್ರಧಾರ ಪ್ರೇಕ್ಷಕರ ಗಮನವನ್ನು ಸೂಕ್ತ ಜಾಗಕ್ಕೆ ಹರಿಸುವ ಕೆಲಸ ಮಾಡುತ್ತಾನೆ. ನಾಟಕದ ಮೂಲ scriptನಿಂದ ನಟರು ಮತ್ತು ಸೂತ್ರಧಾರ ದೂರ ಸರಿಯುವುದಿಲ್ಲ. ತಾವು ಪುರಾಣ ಕಾಲದ ವ್ಯಕ್ತಿಗಳೋ ಎಂಬಂತೆ ಪ್ರೇಕ್ಷಕರೊಂದಿಗೆ ವ್ಯವಹರಿಸುತ್ತಾರೆ. ಅವರ ವ್ಯವಹಾರದಲ್ಲಿ ಸ್ವಲ್ಪ ಕೂಡ ಕೃತ್ರಿಮತೆ ಕಂಡು ಬರುವುದಿಲ್ಲ.

ಅವನು ನಿರ್ದೇಶಿಸಿದ ಇನ್ನೊಂದು ನಾಟಕ Akropolis. ಇದರಲ್ಲಿ ಬೈಬಲ್ ನ ಒಂದು ಕಥೆ ಇದೆ. ಇಲ್ಲಿ ನಟರು ಪ್ರೇಕ್ಷಕರ ಮಧ್ಯೆ ನಟಿಸಿದರೂ ಅವರ ಇರುವನ್ನು ಗಮನಕ್ಕೆ ತೆಗೆದುಕೊಳ್ಳುವುದಿಲ್ಲ. ತಮ್ಮ ಮತ್ತು ಪ್ರೇಕ್ಷಕರ ಮಧ್ಯೆ ಒಂದು ಕಾಣದ ಗೋಡೆ ಇದೆಯೇನೋ ಎಂಬಂತೆ ವರ್ತಿಸುತ್ತಾರೆ. dramatic spaceಗೆ ನಿಶ್ಚಿತ ರೂಪ ಇಲ್ಲದಿದ್ದರೂ ಅದರ ಮತ್ತು ಪ್ರೇಕ್ಷಕರ ಮಧ್ಯೆ ಇರುವ ಗಡಿ “ಶಾಕುಂತಲ” ದಂತೆ ಪಾರದರ್ಶಕವಿಲ್ಲ. ಇನ್ನು Amphitheatre ನಲ್ಲಿ ಇರುವ dramatic spaceಗೆ ನಿಶ್ಚಿತ ರೂಪ ಇದೆ. ಇಲ್ಲಿ ಪ್ರೇಕ್ಷಕರೂ ಎತ್ತರದ ಸ್ಥಾನದಿಂದ ನಾಟಕವನ್ನು ನೋಡುತ್ತಾರೆ. ಆಗ ನಟ ಮತ್ತು ಪ್ರೇಕ್ಷರ ನಡುವೆ ಇರುವ interaction ರಂಗಮಂದಿರಕ್ಕಿಂತ ತುಂಬಾ ವಿಭಿನ್ನ ಸ್ವರೂಪದ್ದಾಗಿರುತ್ತದೆ.

ಹಾಗಿದ್ದರೆ ನಾಟಕದಲ್ಲಿ ಸಂಗೀತಕ್ಕೆ ಯಾವ ಸ್ಥಾನವಿದೆ? Grotowski ಈ ಪ್ರಶ್ನೆಗೆ ನೆರವಾದ ಉತ್ತರ ಕೊಡುವುದಿಲ್ಲ. ಆದರೆ ಅವನ ಬರವಣಿಗೆಗಳಿಂದ ವ್ಯಕ್ತ ಆಗುವದೇನೆಂದರೆ ನಟರ ಮಾತು ಮತ್ತು musical voice ಅಭಿನಯದ ಅವಿಭಾಜ್ಯ ಅಂಗಗಳಾದ್ದರಿಂದ ಅವಶ್ಯಕ. ಆದರೆ ಮುದ್ರಿತ ಧ್ವನಿ ಅನವಶ್ಯಕ. ಅವನು ನಿರ್ದೇಶಿಸಿದ ನಾಟಕ ಮತ್ತು ಸಾಕ್ಷ್ಯಚಿತ್ರ (documentary)ಗಳನ್ನು ನೋಡಿದಲ್ಲಿ ಈ ಮಾತು ಸ್ಪಷ್ಟವಾಗುವದು. ಅವುಗಳಲ್ಲಿ ರಂಗದ ಮೇಲೆ ಇರುವವರು ರಾಗವಾಗಿ ಹಾಡುತ್ತಾರೆ. ನಟರ ಧ್ವನಿಗೆ ಅವನ ನಾಟಕಗಳಲ್ಲಿ ತುಂಬಾ ಎತ್ತರದ ಸ್ಥಾನವಿದೆ. ಆದರೆ ವಾದ್ಯಗಳ ಉಪಯೋಗ ಬಹಳ ಇಲ್ಲ.

Grotowskiಯ ನಾಟಕಗಳಲ್ಲಿ ಬೆಳಕಿನ ಸಂಯೋಜನೆಯ ಅವಶ್ಯಕತೆಯೇ ಇಲ್ಲ. ನಾಟಕದ ಎಲ್ಲ ದೃಶ್ಯಗಳೂ uniform lighting ನಲ್ಲೆ ನಡೆಯುವವು. ಹಾಗೆಯೇ ವಸ್ತ್ರವಿನ್ಯಾಸ ತುಂಬಾ ಸರಳ. ಎಲ್ಲ ನಟರ ವೇಷಭೂಷಣಗಳು ಸಮಾನ. ಹೆಚ್ಚೆಂದರೆ characterisation ಗೆ ಸಹಾಯ ಆಗಲು ಎಲ್ಲೋ ಒಂದು ಸಣ್ಣ symbolic ವ್ಯತ್ಯಾಸ ಇದ್ದೀತು. ಉ.ದಾ. ಕೃಷ್ಣನಿಗೆ ನವಿಲು ಗರಿ, ಅಥವಾ ನಳನಿಗೆ ಕಂಠದಲ್ಲಿ ಮುತ್ತಿನ ಹಾರ, ಹೀಗೆ. ಇದನ್ನು ಬಿಟ್ಟರೆ ಎಲ್ಲರ ಉಡುಪು ಒಂದೇ. ಅದೇ ರೀತಿ ರಂಗ ಸಜ್ಜಿಕೆ ಕನಿಷ್ಠ. ಎಷ್ಟು ಬೇಕೋ ಅಷ್ಟು ಮಾತ್ರ. ಕೇವಲ symbolic. ಉಳಿದೆಲ್ಲ ಪ್ರೇಕ್ಷಕರ ಊಹೆಗೆ ಬಿಟ್ಟಿದ್ದು. ಇದರಿಂದ ಪ್ರೇಕ್ಷಕರ ಗಮನ ನಾಟಕದತ್ತ ಕೇಂದ್ರೀಕೃತವಾಗುತ್ತದೆ. ಬೆಳಕು, ವೇಷ ಅಥವಾ ರಂಗ ಸಜ್ಜಿಕೆಗಳತ್ತ ಅಲ್ಲ ಎಂದು ಅವನ ಅಭಿಪ್ರಾಯ ಆಗಿತ್ತು.

ಎಪ್ಪತ್ತರ ದಶಕದಲ್ಲಿ ಬರೆದ ಚಂದ್ರಶೇಖರ್ ಪಾಟೀಲ (ಚಂಪಾ) ಅವರ ಅಸಂಗತ ನಾಟಕ “ಕೊಡೆಗಳು” ಕನ್ನಡ ನಾಟಕ ಸಾಹಿತ್ಯದಲ್ಲಿ ಒಂದು ವಿಶಿಷ್ಟ ಮೈಲಿಗಲ್ಲು ಅನ್ನಬಹುದು. ನಾಟಕ ಕ್ಷ ಮತ್ತು ಯ ಎಂಬ ಎರಡು ಪಾತ್ರಗಳ ಚಮತ್ಕಾರಿಕ ಸಂಭಾಷಣೆಯ ಮೂಲಕ ಮನಸ್ಸಿನ ಆಳದಲ್ಲಿ ಹುದುಗಿರುವ ಅಮೂರ್ತ ಭಾವನೆಗಳಿಗೆ ರೂಪ ಕೊಡುತ್ತದೆ. ನಾಟಕಕ್ಕೆ ಯಾವ ವಿಶೇಷ ರಂಗ ಸಜ್ಜಿಕೆಯ ಅವಶ್ಯಕತೆ ಇಲ್ಲ. ಕೇವಲ ಸಂಭಾಷಣೆ ಮತ್ತು ಧ್ವನಿಯ ಜೀವಂತಿಕೆಯ ಮೇಲೆ ನಾಟಕದ ಯಶಸ್ಸು ಅವಲಂಬಿತವಾಗಿದೆ. ಆದ್ದರಿಂದ ನಾಟಕ ರೇಡಿಯೋ ಮಾಧ್ಯಮಕ್ಕೆ ಸುಲಭವಾಗಿ ಅಳವಡಿಸಿಕೊಳ್ಳಬಹುದು.

The more differences are emphasized, the more similar they seem. 
(Despite outward appearances and roles we play in everyday life) – Internally we are isolated individuals. The harder we try to communicate inner subtle feelings, the mightier is our failure to do so.

ಚಂಪಾ ನಾಟಕದ  ಉದ್ದಕ್ಕೂ ಮೇಲಿನ ಎರಡು ಆಳ ಅನುಭವಗಳ ಅನ್ವೇಷಣೆ ಮಾಡುತ್ತಾ ಹೋಗುತ್ತಾರೆ. ಈ ಪ್ರಕ್ರಿಯೆಗೆ “ಯ” ನ ಏರಿಸಿದ ಕೊಡೆ ಮತ್ತು “ಕ್ಷ” ನ ಮುಚ್ಚಿದ ಕೊಡೆಗಳು ನಿಮಿತ್ತವಾಗುತ್ತವೆ. ಯ  “ನಾ ಅಂದ್ರ ನಾನs. ಕೊಡೀ ಮನಸ್ಯಾ” ಅನ್ನುತ್ತ  ಸ್ವಂತಿಕೆಯನ್ನು (individualism) ಮೆರೆಯಲು ಪ್ರಯತ್ನಿಸಿದಷ್ಟೂ ಕ್ಷ ಅದನ್ನು ಅಲ್ಲಗೆಳೆದು “ನಾ ಕೊಡೀ ಬಿಡಂಗಿಲ್ಲ. ನೀವೂ ಬಿಡಂಗಿಲ್ಲ. ಅಂದ್ರ ನಾವಿಬ್ಬರೂ ಒಂದs ಅಂಧಂಗ ಆತಲ್ಲ” ಎನ್ನುತ್ತಾನೆ. ಇಬ್ಬರೂ ತಮ್ಮ ತಮ್ಮ ಮನಸ್ಸಿನ ಆಳದಲ್ಲಿ ಹುದುಗಿರುವ ಹೆದರಿಕೆಗಳನ್ನು ಹಂಚಿಕೊಳ್ಳುವ ಪ್ರಯತ್ನ ಮಾಡುತ್ತಾರೆ. ಆದರೆ ನಾಟಕದ ಉದ್ದಕ್ಕೂ ಆ ಪ್ರಯತ್ನದಲ್ಲಿ ಸಂಪೂರ್ಣ ವಿಫಲರಾಗುತ್ತಾ ಹೋಗುತ್ತಾರೆ. ಯ “ಕೊಡೀ ಇಳಿಸಿದರ ಧಾರವಾಡ ಪ್ಯಾಟ್ಯಾಗ ಅಡ್ಡ್ಯಾಡುವ ಬರೆ ಬತ್ಲೆ ಎಮ್ಮಿ, ಗುಬ್ಬಿ ಹಾಂಗ ಅನಸ್ತದ” ಅಂತ ಅಂದರೆ ಕ್ಷ “ಕೊಡೀ ಬಿಚ್ಚಿದರ ಯಾರೋ ನನ್ನ ಪ್ಯಾಂಟಿನ್ಯಾಗ ಶರ್ಟ್ ನ್ಯಾಗ ಫುರ್ ಅಂತ ಗಾಳೀ ಹೊಗಿಸಿ ಬರೆ ಬತ್ತಲ ಗಿಮಿಗಿಮೀ ತಿರಗಿಸ್ತಾರೇನೋ ಅನಸ್ತತೀ” ಅನ್ನುತ್ತಾನೆ. ಇಬ್ಬರೂ “ನಮ್ಮ ಕೊಡೀ ಅದ್ಲಾ ಬದಲಿ ಮಾಡಿಕೊಳ್ಳೋಣು” ಎಂದು ತಮ್ಮ ತಮ್ಮ ಕೊಡೆಗಳನ್ನು ಅದಲಿ ಬದಲಿ ಮಾಡಿಕೊಳ್ಳುತ್ತಾರೆ. ಕ್ರಮೇಣ ತಮ್ಮ ಹೆಸರುಗಳನ್ನ ಅದಲಿ ಬದಲಿ ಮಾಡಿಕೊಳ್ಳುತ್ತಾರೆ. ಕೊನೆಗೆ ತಾವೇ ಅದಲಿ ಬದಲಿ ಮಾಡಿಕೊಳ್ಳುತ್ತಾರೆ. ಬೇರೆ ಆಗುವ ಪ್ರಯತ್ನ ಮಾಡಿದಷ್ಟೂ ತಾವು ತಾವಾಗೇ ಉಳಿಯುವ ದುರಂತ ಪ್ರೇಕ್ಷಕರ ಎದುರು ಸಾಕಾರಗೊಳ್ಳುತ್ತದೆ.

ಪರದೆ ಮೇಲೆದ್ದಾಗ ರಂಗದ ಮೇಲೆ “ಯ” ಮತ್ತು “ಕ್ಷ” ಇದ್ದಾರೆ. ಇಲ್ಲಿಂದಲೇ “non identity” ಪ್ರಾರಂಭ ಆಗ್ತದೆ. ಪಾತ್ರಗಳಿಗೆ ನಿರ್ದಿಷ್ಟ ಎನ್ನಬಹುದಾದ ಹೆಸರುಗಳಿಲ್ಲ.  “ಕ್ಷ” ಬಿಗಿದು ಸುತ್ತಿದ ಕೊಡೆಯನ್ನ ಹಿಡಿದಿದ್ದಾನೆ. “ಯ” ಏರಿಸಿದ ಕೊಡೆಯನ್ನ ತಲೆಯಮೇಲೆ ಹಿಡಿದುಕೊಂಡಿದ್ದಾನೆ. ಇಬ್ಬರೂ ಒಬ್ಬರನ್ನೊಬ್ಬರು ನೋಡಿ ಸಂಭಾಷಣೆಗೆ ತೊಡಗುತ್ತಾರೆ.

ಸಂಭಾಷಣೆ  ತುಣುಕು ೧:

ಕ್ಷ: ಅಲ್ರಿ.. ಅಂಧಂಗ ಟೈಮ್ ಎಷ್ಟಾಗೈತಿ ಹೇಳ್ತೀರೇನು?
ಯ: ಟೈಮs…. ಹೇಳ್ತೀನಿ  ತಡೀರಿ .. (ಮುಗಿಲು ನೋಡುತ್ತಾ) ಟೈಮ್ ನೋಡ್ರೀಪಾ  ಒಂಬತ್ತು ಒಂಬತ್ತೂವರಿ ಹತ್ತು ಹತ್ತೂವರಿ ಆಗಿರಬಹುದು.
ಕ್ಷ: ಹೇ ಹೇ ಕೈಯಾಗ ವಾಚ್ ಕಟಿಗ್ಯಂಡು ಮುಗಿಲು ನೋಡ್ತೀರಲ್ಲಾ? ನೀವು ಅಬ್ಸರ್ಡ್ ಡ್ರಾಮಾದಾಗೆನರೇ ಪಾರ್ಟ್ ಹಾಕೀರೇನು ?
ಯ: ಅಂದ್ರ ನೀವನ್ನದರ ಏನು?
ಕ್ಷ: ಅಲ್ಲ … ಮಳೀ ಇಲ್ಲ,  ಬಿಸಿಲಿಲ್ಲ. ಕೊಡೀ ಏರಿಸಿಗೊಂಡು ಹೊಂಟೀರಿ. ಟೈಮ್ ಕೇಳಿದ್ರ ಏನೇನೋ…
ಯ: ಮತ್ತ ನೀವ್ಯಾಕ ಕೊಡಿ ಹಿಡಕೊಂಡೀರಿ ? ಮಳಿ ಇಲ್ಲಾ  ಬಿಸಿಲಿಲ್ಲಾ…
ಕ್ಷ: ಮಳೀ ಬರಬಹುದು, ಬಿಸಿಲು ಬೀಳಬಹುದು…..
ಯ: ಹೌದು ಮತ್ತ.  ಮಳೀ ಬರಬಹುದು, ಬಿಸಿಲು ಬೀಳಬಹುದು…..ಅದಕ್ಕ ಕೊಡಿ ಏರಿಸೇನಿ ನಾನು. ನಾ ಬೀಳೋದಕ್ಕಿಂತ ಮೊದಲ ಏರಿಸತೆನಿ, ನೀವು ಬಿದ್ದ ಮ್ಯಾಲೆ ಏರಿಸಬಹುದು. ಇಷ್ಟs ಫರಕು.
ಕ್ಷ: ನೀವನ್ನೋದು ಖರೇನ. ನಿಮ್ಮ ಮಾತು ಭಾಳ ಮಜಾರೆಪಾ. ಏನ ಕೆಲಸಾ ಮಾಡ್ತೀರಿ ನೀವು?
ಯ: ಮಾತಾಡೋದs ನಮ್ಮ ಕೆಲಸ.
ಕ್ಷ: ಅಂಧಂಗ ಅದೂ ಇದೂ ಮಾತಾಡೋಣ ಬರ್ರಿ. ನಿಮಗೇನರೆ ಕೆಲಸೈತಿ ಏನು ಮತ್ತ?
ಯ:ಮಾತಾಡೋದs ನಮ್ಮ ಕೆಲಸ.
ಕ್ಷ: ಬರ್ರಿ ಬರ್ರಿ ಮಾತಾಡೋಣ ಬರ್ರಿ. ನನಗ ದಿನಾ ಮಾತಾಡೋರs ಸಿಕ್ಕಿದ್ದಿಲ್ಲ.ನೋಡ್ರಿ. ಮಂದಿ ಬರೆ ತುಟಿ ಪಟ ಪಟ ಬಡಿತಾರs ಹೊರತು ಮಾತಾಡೋದs ಇಲ್ಲ. ಅವರು ಹೇಳೋದೊಂದು, ನಾ ಕೇಳೋದೊಂದು,  ಇದ್ದದ್ದs ಒಂದು. ಖರೆ ಮಾತಾಡೋರು  ಮಾತ  ಆಡೋರು ನೀವs ನೋಡ್ರಿ.

The harder we try to communicate inner subtle feelings, the mightier is our failure to do so.

 

ಸಂಭಾಷಣೆ ತುಣುಕು ೨:

ಯ: ಆ ಕೊಡಿ ತರ್ರಿಲ್ಲೇ. (ಕಸಗೊಂಡು ಹುರಿ ಬಿಚ್ಚತೊಡಗುವನು.)
ಕ್ಷ: (ತಿರುಗಿ ಕಸಗೊಂಡು ಹುರಿ ಸುತ್ತುತ್ತ)
ಛೆ ಛೆ ಛೆ – ಏನು ಮಾಡಾಕತ್ತೀರಿ ನೀವು? ತರ್ರಿಲ್ಲೇ.  ನನ್ನಂಥ ನಾನs – ಕೊಡೀ ಮಾಲಕನs ಬಿಚ್ಚೋದಿಲ್ಲ ಅದನ್ನ. ನೀವು….
ಯ: ಏನಂದ್ರಿ ? ಕೊಡಿ ಬಿಚ್ಚೋದಿಲ್ಲs?
ಕ್ಷ: ಮಳೀ ಬಂದ್ರ ಬರಲಿ. ಬಿಸಿಲು ಬಿದ್ರ ಬೀಳಲಿ. ನಾ ಕೊಡಿ ಬಿಚ್ಚೋದಿಲ್ಲ.  ಇದನ್ನ ನಮ್ಮ ಅಪ್ಪ ಬಿಚ್ಚಿಲ್ಲ. ಅವರಪ್ಪ ಬಿಚ್ಚಿಲ್ಲ. ಬೇಸಿ ಹೇಳ್ತೀರೆಪ್ಪಾ.
ಯ: ಮಜಾ ಅದೀರೆಪಾ ನೀವೂ.- ಥೇಟ್ ನನ್ನ ವಿರುದ್ಧ.
ಕ್ಷ: ಅಂದ್ರ ..?
ಯ: ನಾ ಕೊಡೀ ಮುಚ್ಚೋದಿಲ್ಲ. ನೀವು ಕೊಡಿ ಬಿಚ್ಚೋದಿಲ್ಲ.
ಕ್ಷ:ಅಂದ್ರ  ?
ಯ: ಅಂದ್ರss.  ಮಳೀ ಬರಲಿ. ಬಿಸಿಲು ಬೀಳಲಿ. ನಾ ಏನು ದಾದ ಮಾಡೋದಿಲ್ಲ. ಅವು ಇಲ್ದಿಕ್ರೂ ನನ್ನ ತಲಿ ಮ್ಯಾಲ ಕೊಡೀ ಇರಾಕs ಬೇಕು. ಕೊಡೀ ಇಳಿಸಾಕ ಬರಧಾಂಗ ಮಳೀ ಜಡದ ಬಿಟ್ಟನೀ. ತಿಳೀತ..?
ಕ್ಷ: ಅಂದ್ರ ನಾನೂ ನೀನೂ – ಅಲ್ಲ ನಾವೂ ನೀವೂ ಒಂದs ಅಂಧಂಗ ಆತಲ್ಲ.
ಯ: ಅಧೆಂಗ ? ಥೇಟ್ ವಿರುದ್ಧ. !
ಕ್ಷ: ಅಲ್ರಿ  ನೀವೂ ಕೊಡಿ ಬಿಡಂಗಿಲ್ಲ, ನಾನೂ ಕೊಡಿ ಬಿಡಂಗಿಲ್ಲ. ಮತ್ತ ಒಂದss ಆತಲ್ಲ.
ಯ: ಅಧೆಂಗ್ರೀ ಮಿಸ್ಟರ್, ? ಒಂದs ಹೆಂಗಾಗ್ಲಿಕ್ಕೆ ಬರ್ತತೀ? ನಾ ಅಂದ್ರ ನಾನs. ನನಗ ಎಲ್ಲಾರೂ ಕೊಡಿ ಮನಸ್ಯಾ ಕೊಡಿ ಮನಸ್ಯಾ ಅಂತಾರ. ತಿಳೀತೇನು ?
ಕ್ಷ: ನನಗೂ ಕೊಡಿ ಮನಸ್ಯಾ ಕೊಡಿ ಮನಸ್ಯಾ ಅಂತಾರ. ತಿಳೀತೆನು.?

The more differences are emphasized, the more similar they seem.

ಸಂಭಾಷಣೆ ತುಣುಕು ೩:

ಇಲ್ಲಿ ಚಂಪಾ ಎಲ್ಲರ ಮನಸ್ಸಿನ ಆಳದಲ್ಲಿರುವ fear of the unknown ಮತ್ತು insecurity ಯ ಭಾವನೆಗಳಿಗೆ  ಕಾವ್ಯಮಯ ಧ್ವನಿ ಕೊಡುತ್ತಾರೆ.

ಕ್ಷ: ಈ ಕಾಯಿ ಕಾಯಿ ಅನಕೊಂತ ಹಣ್ಣಾಗೂದು ಬ್ಯಾಡ. ಮಾತಾಡೋಣ ಬರ್ರಿ. ಈಗ ಒಂದು ಪ್ರಶ್ನ್ಯಾ.
ಯ:ಏನು ಪ್ರಶ್ನ್ಯಾ?
ಕ್ಷ: ನೀವು ಕೊಡೀ ಯಾಕ ಇಳಸೋದಿಲ್ಲ ?
ಯ: (ತನ್ನಷ್ಟಕ್ಕೆ) ಕೊಡೀ ಯಾಕ ಇಳಿಸೋದಿಲ್ಲ ?
ಕ್ಷ: ಹುಂ . ಕೊಡೀ ಯಾಕ ಇಳಿಸೋದಿಲ್ಲ ?
ಯ: ಯಾಕಂದ್ರ… ಯಾಕಂದ್ರ … ಹತ್ತರ ಬರ್ರಿಲ್ಲೇ..
ಕ್ಷ: ಬಂದೆ ಬಂದೆ ..(ಹತ್ತಿರ ಬಂದು ಕಿವಿ ಒಡ್ಡುವನು.)
ಯ: ಕೊಡೀ ಇಳಿಸಿದ್ರ  — ಯಾಕಂದ್ರ ಕೊಡೀ ಇಳಿಸಿದ್ರ .. ಯಾಕಂದ್ರ – ಯಾಕಂದ್ರ  — ಧಾರವಾಡ ಪ್ಯಾಟ್ಯಾಗ ಎಮ್ಮಿ ಅಡ್ಯಾಡತಾವಲ್ಲ…. ಬರೆ ಬತ್ತಲ ಎಮ್ಮಿ ಅಡ್ಯಾಡತಾವಲ್ಲ –
ಕ್ಷ: ಎಮ್ಮಿ? ಎಮ್ಮಿ ಬರೆ ಬತ್ತಲ ಇರ್ತಾವೇನು?
ಯ: ಕೊಡೀ ಇಳಿಸಿದ್ರ ನನಗ ಹಂಗ — ಎಮ್ಮಿ ಹಂಗ, ಗುಬ್ಬಿ ಹಂಗ, ಸೂರ್ಯನ ಹಂಗ ಬರೆ ಬತ್ತಲ ಆಧಾಂಗ ಅನಿಸ್ತsತಿ. – ಎನ್ರೆಪ!
ಕ್ಷ: ಖರೆ ಖರೆ.
ಯ: ಆದ್ರ ನನಗ ಬರೇಬತ್ತಲ  ಆಗಾಕ ಬರೂದುಲ್ಲ !. ಬರ್ತತೀ.. ಆದ್ರ ಹೆದರಿಕೀ.  !
ಕ್ಷ: ಆದ್ರ  … ಎಮ್ಮಿ ಗುಬ್ಬಿ ಪಬ್ಬಿ ಹೆದರೋದಿಲ್ಲ?
ಯ: ನಾ ಎಮ್ಮಿ ಅಲ್ಲ. ನಾ ಗುಬ್ಬಿ ಅಲ್ಲ. ನಾ ಮನೀ ಅಲ್ಲ. ನಾ ಚಂದ್ರ ಅಲ್ಲ. ನಾ—
ಕ್ಷ: ನಾ–
ಯ: ನಾ ಮನಸ್ಯಾ. ಅದಕ್ಕ ಹೆದರಿಕಿ.  ಅಂಧಂಗ ನೀವು ಕೊಡೀ ಯಾಕ ಬಿಚ್ಚೋದಿಲ್ಲ?
ಕ್ಷ: ಕೊಡೀ ಬಿಚ್ಚಿದರ ನನಗೂ ಹಂಗ ಅನಿಸ್ತತೀ. (ಪಿಸುದನಿಯಲ್ಲಿ) ಹತ್ರ ಬರ್ರಿಲ್ಲೇ ..
ಯ ಬಂದೆ ಬಂದೆ..(ಹತ್ತಿರ ಬಂದು ಕಿವಿ ಒಡ್ಡುವನು.)
ಕ್ಷ: ಕೊಡೀ ಬಿಚ್ಚಿದರ ನನಗೂ ಹಂಗ ಅನಿಸ್ತತಿ.
ಯ: ಹ್ಯಾಂಗ?
ಕ್ಷ: ಯಾರೋ ನನ್ನ ಬೆಲ್ಟ್ ಬಿಚ್ಚಿ ಬಟನು ಬಿಚ್ಚಿ ಪ್ಯಾಂಟಿನ್ಯಾಗ ಶರ್ಟ್ ನ್ಯಾಗ ಫುರ್ ಅಂತ ಗಾಳೀ ಹೊಗಿಸಿ ಬರೆ ಗಾಳ್ಯಾಗ ಬರೆ ಬತ್ತಲ ಗಿಮಿಗಿಮೀ ಗಿಮಿಗಿಮೀ ತಿರಗಿಸ್ತಾರೇನೋ ಅನಸ್ತತೀ. — ಅದಕ ಕೊಡೀಗೆ ಹುರೀ ಸುತ್ತಿ ಬಂದೋಬಸ್ತ್ ಇಟ್ಟೀನಿ.
ಯ:ಹಂಗಾರ…
ಕ್ಷ: ಹಂಗಾರ ನಾವಿಬ್ರೂ ಒಂದೇ ಅಂದ ಹಾಂಗಾತು.
ಯ:ಹಂಗಾರ ನಾವಿಬ್ರೂ ಒಂದೇ ಅಂದ ಹಾಂಗಾತು.

The more differences are emphasized, the more similar they seem.

ಸಂಭಾಷಣೆಯ ತುಣುಕು ೪:

ಕ್ಷ: ನನ್ನ ಕೊಡೀ ತಗೋಂಡು ಏನು ಮಾಡ್ತೀ?
ಯ: ನಿನ್ನ ಕೊಡೀ ತಗೊತೀನಿ. ಅದಕ್ಕ ಹುರಿ ಬಿಗದೀಯಲ್ಲ, ಅದನ್ನ ಬಿಚ್ಚಿ ಒಗೀತೀನಿ. ಪ್ಹುಸ್ ಪ್ಹುಸ್ ಅಂತ ಗಾಳಿ ಹಾಕಿ ಶಿವನ ಬುಟ್ಟಿ ಮಾಡತನೀ. ಅರವೀ ತುಂಬಾ ತೂತು ಕೊರದು ಮುಗಲ ನೋಡತೀನಿ.
ಅದಿರಲಿ. ನನ್ನ ಕೊಡೀ ತಗೊಂಡು ನೀ ಏನು ಮಾಡ್ತೀ?
ಕ್ಷ: ನಿನ್ನ ಕೊಡೀ ತಗೊತೀನಿ. ಅದಕ್ಕ ಮಳೀ ಜಡದೀಯಲ್ಲ,ಅದನ್ನ ಕಿತ್ತಿ ಒಗೀತೀನಿ. ಕೊಡೀ ಇಳಿಸಿ ಹುರಿ ಬಿಗದು ಹೊಳೀಗೆ ಹೋಗ್ತೀನಿ.ಹರಿಯೋ ಹೊಳ್ಯಾಗ ಕೊಡೀ ತುದಿ ಆಡಿಸಿ ಆಡಿಸಿ ಕವಿತಾ ಬರಿತೀನಿ. ದಂಡೀ ಮ್ಯಾಲಿನ ಉಸುಕಿನ್ಯಾಗ ನಕಾಶ ತಗಿತೀನಿ. ಕಾಗೀ ತಗಿತೀನಿ. ಮನೀ ತಗಿತೀನಿ.
ಯ: ನೀ ಈ ಕಡೇ ಬಾ ಹಂಗಾರ.
ಕ್ಷ: ನೀ ಈ ಕಡೇ ಬಾ ಹಂಗಾರ.

(ಕೊಡೆಗಳನ್ನು ಅದ್ಲಾ ಬದಲೀ ಮಾಡಿಕೊಂಡಿದ್ದಾರೆ)

ಯ: ಹೆಂಗ ಅನಿಸ್ತತೀ ನನ್ನ ಕೊಡೀ?
ಕ್ಷ: ನಿನ್ನ ಕೊಡೀ ಹೂವಿನ ಕೋಲಾಗೇತಿ ನೋಡು. ನಂದು?
ಯ: ನಿನ್ನ ಕೊಡೀ ಮುತ್ತಿನ ಕುಂಚಿಗೀ ಆಗೇತಿ ನೋಡು.

ಕೊನೆಯ ಸಂಭಾಷಣೆ ತುಣುಕು:

ಯ: ನನಗ ಒಂದು ವಿಚಾರ ಹೊಳೀತು.
ಕ್ಷ: ಮುಂದ?
ಯ: ನಾವು ಕೊಡೀ ಅದ್ಲಾ ಬದಲೀ ಮಾಡಿದ್ವಿ, ಹೆಸರು ಅದ್ಲಾ ಬದಲೀ ಮಾಡಿದ್ವಿ.
ಕ್ಷ: ಮಾಡಿದ್ವಿ.
ಯ: ಈಗ ನಾವs ಅದ್ಲಾ ಬದಲಿ ಯಾಕ ಆಗಬಾರದು?
ಕ್ಷ: ಯಾಕ ಆಗಬಾರದು?
ಯ: ಹಂಗಾರ ಕೊಡೀ ಕೆಳಗಿಡು.

(ಇಬ್ಬರೂ ಜಾಗ ಅದ್ಲಾ ಬದಲೀ ಮಾಡಿದ್ದಾರೆ)
ಕ್ಷ: ಈಗ ಹೆಂಗ ಅನಸ್ತತೀ?
ಯ: ಬರೆ ಬತ್ತಲ ಹೊಳ್ಯಾಗ ಎಮ್ಮಿ ಹಂಗ ಈಸ್ಯಾಡಿ ದಂಡಿಗೆ ಬಂಧಾಂಗ. ನಿನಗ?
ಕ್ಷ: ಬರೆ ಬತ್ತಲ ಮುಗಲಾಗ ಗುಬ್ಬಿ ಹಂಗ ಹಾರ್ಯಾಡಿ ಗೂಡಿಗೆ ಬಂಧಾಂಗ.
ಯ: ಮುಗಿಲ ? ನೋಡಪಾ ಮಳೀ ಬರಬಹುದು…ಆ?
ಕ್ಷ: ಉಹು .. ಬಿಸಿಲು ಬೀಳಬಹುದು…
ಯ: ಮಳೀ ಬಂದು ..
ಕ್ಷ: ಬಿಸಿಲು ಬಿದ್ದು…
ಯ, ಕ್ಷ: ನರೀ ಮದಿವೀ ಆಗಬಹುದು…..
ಏ… , ಏ… , ಅಂಧಂಗ ಟೈಮ್ ಎಷ್ಟಾಗೆತಿ ನೋಡೋ?
ಕ್ಷ: ಟೈಮss… ನೋಡ್ತನೀ ತಡೀ.
ಟೈಮು ನೋಡಪಾ ಹನ್ನೊಂದುವರೀ ಹನ್ನೆರಡು ಹದಿಮೂರು ಹದಿನಾಕಾಗಿರಬಹುದು.

Glorious uncertainties of life.

ಆದಿಯೊಳಗ  ಎಲ್ಲಾ  ಕಡಿಗೆ ಬರೇ ನೀರಿತ್ತು. ಸಮುದ್ರ  ನೆಲಾನ  ನುಂಗಿಬಿಟ್ಟಿತ್ತು. ತಿಳಿ ನೀಲಿ ಆಕಾಶ. ಮತ್ತ   ಕಡು ನೀಲಿ ಸಮುದ್ರ. ಎಲ್ಲಾ ಕಡೇ ನೀಲಿನs  ನೀಲಿ.

ಪೂರ್ವಕ್ಕ   ಆಕಾಶ ಸಮುದ್ರ ಒಂದಾಗುವಲ್ಲೆ ಬೆಳ್ಳಗಿನ ಬೆಳಕಿನ್ಯಾಂಗ ಬೆಳಗವ್ವನ ಮನೀ.   ಪಶ್ಚಿಮಕ್ಕ   ಆಕಾಶ   ಸಮುದ್ರ ಒಂದಾಗುವಲ್ಲೆ ಸಂಜೀಗೆಂಪಿನ್ಯಾಂಗ   ಕೆಂಪವ್ವನ  ಮನೀ. ಸಮುದ್ರದ ನಟ್ಟ ನಡಬರಕ ನೀರಾಗ   ಬಣ್ಣಬಣ್ಣದ  ಮನಸಿನ ಮಾಯವ್ವನ ಮನೀ. ಬೆಳಗವ್ವನ ಮನೀ ಅಂಗಳದಾಗ  ಸಾರಿಸಿದ  ನೆಲದ  ಮ್ಯಾಲೆ  ಬಿಳಿ  ರಂಗೋಲಿ.   ಕೆಂಪವ್ವನ  ಮನೀ  ಅಂಗಳದಾಗ ನುಣ್ಣಗಿನ  ಕಲ್ಲಿನ  ಮ್ಯಾಲೆ ನಕ್ಷತ್ರಗೋಳ ರಂಗೋಲಿ.   ಮಾಯವ್ವನ ಮನೀ ಅಂಗಳದಾಗ   ಬಣ್ಣಬಣ್ಣದ   ಖಡುವಿನಿಂದ ಬರದ  ರಂಗೋಲಿ.

ಬೆಳಗವ್ವನ  ಮನೀ ಹಿತ್ತಲದಾಗ ಹಗ್ಗದ ಮ್ಯಾಲೆ ಒಂದು ಬಿಳೀ   ಧೋತ್ರಾ  ಇರತಿತ್ತು. ಅದರ  ಬಾಜೂಕ  ಹಳದಿ  ಪಗಡೀ  ವಸ್ತ್ರಾ.   ದಿನಾ  ನಶೀಕಿನ್ಯಾಗ ಆಕಾಶದಾಗ  ಚಿಕ್ಕಿ ಮಂದ ಆಗೂ ಹೊತ್ತಿಗೆ ಸೂರ್ಯಾ ಬೆಳಗವ್ವನ ಮನೀ ಹಿತ್ತಲದಾಗಿನ ಕಿಂಡಿಯೊಳಗಿಂದ ಮ್ಯಾಲೆ ಬರತಿದ್ದ.  ಸಮುದ್ರ  ಸ್ನಾನಾ ಮಾಡಿ  ಹಿತ್ತಲದಾಗಿನ  ಬಿಳೇ   ಧೋತ್ರಾ  ಉಟಗೊಂಡು ಹಳದೀ  ಪಗಡೀ   ತಲೀಮ್ಯಾಲೆ ಇಟಗೊಂಡು   ಬೆಳಗವ್ವನ  ಜೋಡಿ ಸ್ವಲ್ಪ ಅದೂ ಇದೂ ಮಾತಾಡಿ   ಆಕಾಶ ಏರತಿದ್ದ. 

Hopi-1

ಸೂರ್ಯಾನ ನಡಿಗಿ ದೃಷ್ಟಿ   ಸೀದಾ   ಪಶ್ಚಿಮದ ಕಡೀಗೆ.   ಅವಂಗ   ಒಂದs ಹಾದಿ. ಅಂವಾ ಹೋಗೋಮುಂದ   ಸಮುದ್ರದ   ತೆರಿ ಎತ್ತರ ಆಕಾಶಕ್ಕ ಏರತಿದ್ದು.   ಕ್ಯಾಕೀ   ಹೊಡಿತಿದ್ದು. ನೆಲಾ   ಕಾಲತಳಗ   ತುಳಿದ ಸೊಕ್ಕು ಅವಕ್ಕ..   ಬಾರಲೇ  ಆಟಾ ಆಡೋಣು   ಅಂತ ಸೂರ್ಯಾನ್ನ   ಕರೀತಿದ್ದು.   ಸೂರ್ಯಾ   ಬರೇ   ನಗತಿದ್ದ.    ನಿಮ್ಮ   ಆಟಾ ನಿಮಗ  ನನ್ನ ಆಟಾ   ನನಗ ಅಂತ   ಹೇಳಿ ಮುಂದ  ಹೋಗತಿದ್ದ.

ಸಂಜೀ   ಹೊತ್ತಿಗೆ ಸೂರ್ಯಾ ಕೆಂಪವ್ವನ ಮನೀ   ಹಿತ್ತಲದಾಗ ಇಳೀತಿದ್ದ. ಕೆಂಪವ್ವನ   ಮನೀ   ಹಿತ್ತಲದಾಗ ಹಗ್ಗದ ಮ್ಯಾಲೆ  ಒಂದು ಕೆಂಪಗಿನ  ಧೋತ್ರಾ. ಅದರ ಬಾಜೂಕ ಒಂದು   ದಟ್ಟ ನೀಲಿ  ಪಗಡಿ ವಸ್ತ್ರಾ.   ಸೂರ್ಯಾ   ಸಮುದ್ರದಾಗ ಸ್ನಾನಾ ಮಾಡಿ ಹಿತ್ತಲದಾಗಿನ   ಕೆಂಪು   ಧೋತ್ರಾ   ಉಟಗೊಂಡು ತಲೀಗೆ ದಟ್ಟ ನೀಲಿ  ಪಗಡೀ ಇಟಗೊಂತಿದ್ದ.   ಕೆಂಪವ್ವ   ಅವಂಗ   ಬೆಲ್ಲಾ ನೀರು ಕೊಡತಿದ್ದಳು. ಬೆಲ್ಲಾ    ತಿಂದು ನೀರು ಕುಡುದು   ಸೂರ್ಯಾ   ಕೆಂಪವ್ವನ   ಮನೀ   ಹಿತ್ತಲದಾಗಿಂದ   ಸಮುದ್ರದ ಆಳಕ್ಕ ಮುಳುಗತಿದ್ದಾ.

ನಡು ರಾತ್ರ್ಯಾಗ   ಮಾಯವ್ವನ ಮನೀ    ಹಿತ್ತಲದಾಗ ನಿಂತು ಹೋಗತಿದ್ದಿರಬಹುದೋ ಏನೋ.   ಆದ್ರ    ಮಾಯವ್ವ    ಭಾಳ ನಿದ್ದಿಬಡಕಿ. ಕಣ್ಣು ಮುಚ್ಚಿದರ  ಕಲ್ಲಿನ   ಗೊಂಬಿ.

ಹೀಂಗ   ದಿನಾ   ಕಳದು ವಾರಾತು. ವಾರ   ಕಳದು ತಿಂಗಳಾತು. ತಿಂಗಳು   ಕಳದು  ವರ್ಷಾದ್ವು. ಒಂದು  ಯುಗಾ   ಕಳದು ಮತ್ತೊಂದು  ಬಂತುಇನ್ನೊಂದು   ಬಂತು.   ಸೂರ್ಯಾ   ಸಮುದ್ರದ ನೆತ್ತಿಮ್ಯಾಲೆ ನಡದು ನಡದು ತೆರಿ ಬತ್ತಿಸಿದಾ.   ನೀರು    ಬತ್ತಿಸಿದಾ. ನೀರು   ಮಾಡಾತು. ಮುಗಿಲಿಗೆ   ಏರಿತು. ನೆಲಾ   ಮ್ಯಾಲೆ   ಬಂತು.   ಮಾಯವ್ವನ    ಮನೀ ಸುತ್ತಲೂ ಬಯಲಾತು.ಸಮುದ್ರ   ಬೆಳಗವ್ವ   ಮತ್ತ   ಕೆಂಪವ್ವನ ಮನೀ ಬಾಗಿಲತನಕಾನ   ಉಳೀತು.

ಮಾಯವ್ವ   ಮನೀ   ಹೊರಗ   ಬಂದ್ಲು. ಸುತ್ತಲೂ   ಇದ್ದ   ಮಣ್ಣಿನ ನೆಲಾ   ಕಲ್ಲಿನ ಗುಡ್ಡಾ   ನೋಡಿದ್ಲು.ಮುಗಲಾಗಿನ   ಮಾಡ ನೋಡಿದ್ಲು.  ಮಾಯವ್ವನ   ದೃಷ್ಟಿಗೆ   ಮಾಡ   ಕಪ್ಪಗಾದ್ವು .   ಧೋ ಧೋ    ಅಂತ ನೀರಾಗಿ ನೆಲಕ್ಕ ಸುರದ್ವು.   ಮತ್ತ    ಹೋಗಿ   ಸಮುದ್ರ ಸೇರಿಕೊಂಡ್ವು. ಒದ್ದಿ ನೆಲದ   ಮ್ಯಾಲೆ ಮಾಯವ್ವ    ಹೀಂಗ    ಸೆರಗ    ಬೀಸಿದ್ಲು . ನೆಲಾ    ಎಲ್ಲಾ    ಹಸಿರಾತು. ನೆಲದ ಮ್ಯಾಲೆ    ಗಿಡಾ ಹುಟ್ಟಿದ್ವು.   ಬಳ್ಳಿ ಹುಟ್ಟಿದ್ವು.   ಗಿಡಾ ಬೆಳದು   ಮುಗಿಲು ಮುಟ್ಟಿದ್ವು. ಗಿಡಾ ಗಿಡಾ ಕೂಡಿ   ಕಾಡು ಆತು. ಬಳ್ಳಿ    ಗಿಡಕ್ಕ ಸುತಿಗೊಂಡ್ವು.     ಬಣಬಣ್ಣದ ಹೂ ಬಿಟ್ವು.   ಎಲ್ಲಾ ಕಡೆ ಏಳು ಬಣ್ಣಾ     ಸುರುದ್ವು.

ಇಷ್ಟೆಲ್ಲಾ   ಅದ್ರೂ ಬೆಳಗವ್ವಗ   ಮನಿಸ್ಸಿನ್ಯಾಗ ಏನೋ   ಬರೋಬರಿ   ಇಲ್ಲಾ    ಅನಿಸತಿತ್ತು. .   ಒಂದಿನಾ   ಆಕೀ ಸೂರ್ಯಾನ   ಕೂಡ    ಕೆಂಪವ್ವಗ ಭೆಟ್ಟಿಗೆ    ಬಾ ಆಂತ    ಹೇಳಿ   ಕಳಿಸಿದ್ಲು.   ಕೆಂಪವ್ವ   ಮರುದಿನಾ   ಕಾಮನ    ಬಿಲ್ಲು   ಏರಿದ್ಲು.ಸೂರ್ಯಾ   ಇಕಡಿಂದ ಅಕಡೆ ಹೋಗೂದರಾಗ ಬೆಳಗವ್ವನ    ಮನೀ    ಬಾಗಿಲದಾಗ   ಬಂದು ನಿಂತ್ಲು.    ಇಬ್ಬರೂ    ಮನಸ್ಸಿನ್ಯಾಗಿನ   ಮಾತು ಹಂಚಿಗೊಂಡರು.   ಆದಿ    ಇಂದ   ಈಗಿನ   ತನಕಾದ ಮಾತು.   ಕಡೀಕ    ಬೆಳಗವ್ವ    “ಇಷ್ಟೆಲ್ಲ     ಆದ್ರೂ    ಏನೋ ಇಲ್ಲ    ಅಂತ    ಅನಸ್ತದ    ನೋಡss “ ಅಂತ    ಬೆಳಗವ್ವ ಕೆಂಪವ್ವನ ಹತ್ರ ಹೇಳ್ಕೊಂಡಳು.

parrot

ಮರುದಿನಾ   ಕೆಂಪವ್ವ    ಒಂದು ಮಣ್ಣಿನ ಹಕ್ಕಿ ಮಾಡಿದ್ಲು.   ಬೆಳಗವ್ವ   ಮನ್ಯಾನ   ಕುಂಚಿಗಿ ತಗೊಂಡು   ಬಂದ್ಲು.   ಹಸಿರು    ಕುಂಚಿಗೀಗೆ   ಕೆಂಪು    ಬಣ್ಣದ   ಅಂಚು.    ಇಬ್ಬರೂ ಕುಂಚಿಗ್ಯಾಗ    ಕೈ ಆಡಿಸಿ ಅದನ್ನ ಮಣ್ಣಿನ   ಹಕ್ಕಿ   ಮ್ಯಾಲೆ ಇಟ್ಟರು. ಸ್ವಲ್ಪ   ಹೊತ್ತಾದ ಮ್ಯಾಲೆ ಕುಂಚಿಗೀ    ಅಳಗ್ಯಾಡಿತು.   ಜೀವಾ    ತುಂಬಿದ    ಗಿಳಿ   ಕುಂಚಿ   ಒಳಗಿಂದ ಹೊರಗ ಬಂತು.   “ನನ್ನ್ಯಾಕ   ಇಷ್ಟು ಗಡಿಬಿಡೀಲೆ   ಕರಿದ್ರಿ?” ಅಂತ   ಕೇಳ್ತು.   ಕೆಂಪವ್ವ   “ನೀ    ನೆಲದ ಮ್ಯಾಲೆ   ಎಲ್ಲಾ    ಕಡೇ   ಸುತ್ತಿ   ಬಾ.    ಬಂದು    ಏನು  ನೋಡಿದಿ   ಅಂತ   ಹೇಳು “ ಅಂತ  ಗಿ ಳಿ   ಮುಗಿಲಿಗೆ ಹಾ ರಿಸಿದ್ಲು.

ಸಂಜೀಕ  ಗಿಳಿ ತಿರುಗಿ ಬಂತು.  ಬೆಳಗವ್ವನ   ಅಂಗಳದಾಗಿನ ಕುಂಬೀ   ಮ್ಯಾಲೆ ಕೂತು “ಬಿಳೀ  ಮುಗಿಲು  ಸುತ್ತಿದೆ,   ಕಾಡಿನ   ನೆತ್ತಿ   ಮ್ಯಾಲೆ ಹಾರಿದೆ, .    ಗಿಡದ ಟೊಂಗಿ ಮ್ಯಾಲೆ ಕೂತೆ,  ಪೇರು   ಹಣ್ಣು   ಎಂಜಲಾ  ಮಾಡಿದೆ.ನೆಲಾ   ಮುಟ್ಟಿ ದೆ.   ಬಣ್ಣಬಣ್ಣದ   ಹೂ ನೋಡಿದೆ,   ತಿಳೀ ನೀರು   ಕುಡಿದೆ.   ಎಲ್ಲಾ   ಛಂದ ಇತ್ತು.   ಆದ್ರ   ಇದss   ಇರಲಿಲ್ಲ.” ಆಂತ್ಯು.  “ಇದ ss  ಅಂದ್ರ ಯಾವದು?”   ಆಂತ   ಕೆಂಪವ್ವ ಕೇಳಿದ್ಲು. “ಅಂದ್ರ  ಮಾತು ಹಂಚಿಗೊಳ್ಳಲಿಕ್ಕೆ    ಒಂದೂ    ಜೀವಾನs   ಇರಲಿಲ್ಲ.”   ಬೆಳಗವ್ವ   ಕೆಂಪವ್ವ ಇಬ್ಬರೂ ಮೆಲ್ಲಗ ನಕ್ಕರು

ಮರುದಿನಾ    ಬೆಳಗವ್ವ ಕೆಂಪು ಮಣ್ಣಿನಿಂದ ಒಂದಿಷ್ಟು ಹೆಣ್ಣಿನ ಗೊಂಬೀ ಮಾಡಿದ್ಲು.ಹೆಣ್ಣಿಗೊಂದು    ಜೋಡು ಬ್ಯಾಡೇನ ಅಂತ ಕೆಂಪವ್ವ ಅದೇ ಮಣ್ಣಿಂದ    ಅಷ್ಟೇ ಗಂಡಿನ   ಗೊಂಬೀ    ಮಾಡಿದ್ಲು.   ಗೊಂಬೀ    ಕಣ್ಣೀಗೆ    ಕರೀ    ಕಾಡಿಗಿ ಇಟ್ಟರು.  ಗೊಂಬಿಗೋಳ    ಮ್ಯಾಲೇ    ರೇಷ್ಮೀ ವಸ್ತ್ರಾ  ಹೊಚ್ಚಿದರು.   ಹಾಂ ಹಾಂ    ಅನ್ನೂದರಾಗ   ಗೊಂಬಿ   ಎಲ್ಲಾ   ಜೀವಂತ   ಆದ್ವು. ಇಬ್ಬರೂ    ಅವಕ್ಕ   ಭಾಷಾ    ಕಲಿಸಿದ್ರು,   ಉಡಿಗಿ   ತೊಡಿಗಿ, ಹಾಡು, ಕುಣಿತಾ, ರೀತಿ, ಪದ್ಧತಿ   ಎಲ್ಲಾ   ಕಲಿಸಿದ್ರು.  ನಿಮ್ಮ    ಎಲ್ಲಾರದ್ದೊಂದು ಪಂಗಡ ಅಂದ್ರು. ನೀವು    ಪೂರ್ವಕ್ಕ  ಹೋಗಿ ಸಮಾಧಾನದಿಂದ ಸಂತೋಷದಿಂದ    ಇರ್ರಿ   ಅಂತ   ಕಳಿಸಿಕೊಟ್ರು.

ಹೀಂಗ   ದಿನಾ   ಒಂದೊಂದು   ಪಂಗಡ   ಹುಟ್ಟಿಸಿದ್ರು. ಯಾವಾಗಲೂ   ಒಂದು   ಗಂಡಿಗೆ   ಒಂದು   ಹೆಣ್ಣು   ಮಾಡೂದನ್ನ ಮರೀಲಿಲ್ಲ.  ಎಲ್ಲಾರಿಗೂ   ಅವರದ್ದ   ಭಾಷಾ, ಉಡಿಗಿ,  ತೊಡಿಗಿ,  ಹಾಡು, ಕುಣಿತಾ, ರೀತಿ, ಪದ್ಧತಿ   ಕಲಿಸಿದ್ರು.  ಭೂಮಿಮ್ಯಾಲೆ   ನಿಮ್ಮದ   ಜಾಗಾ   ಮಾಡಿ ಬ್ಯಾರೆ   ಪಂಗಡಗೋಳ   ಜೋಡಿ   ಹೊಂದಿಕೊಂಡು   ಹೋಗ್ರಿ ಅಂತ   ಕಳಿಸಿಕೊಟ್ರು.   ಸ್ವಲ್ಪ    ದಿನಾ    ಆದಮ್ಯಾಲೆ  ಇನ್ನ ಸಾಕಂತ   ಕೆಂಪವ್ವ ಮನೀಗಿ   ಹೊಂಟು   ನಿಂತ್ಲು.   ಹೋಗಿ    ಬಾ   ಅಂತ    ಕಾಮನ    ಬಿಲ್ಲಿಗೆ   ಆನಿಸಿ ನಿಂತು   ಬೆಳಗವ್ವ    ಕೆಂಪವ್ವನ್ನ ಬೀಳ್ಕೊಟ್ಲು.

ಇದನ್ನ   ನೋಡಿ ಮಾಯವ್ವ ಲಟಿಗಿ ಮುರುದ್ಲು.   ನನಗೂ    ಇದನ್ನ ಮಾಡ್ಲಿಕ್ಕೆ ಬರವಲ್ಲದೇನು ಅಂತ ಹಟಕ್ಕ ಬಿದ್ಲು.   ಮುಂಜಾನೆದ್ದು   ಒಂದಿನಾ ಬಿಳೇ   ಮಣ್ಣಿನಿಂದ   ಒಂದಿಷ್ಟು   ಗಂಡಿನ   ಗೊಂಬಿ ಮಾಡಿದ್ಲು.   ಅದ s   ಮಣ್ಣಿಂದ   ಒಂದಿಷ್ಟು   ಹೆಣ್ಣಿನ   ಗೊಂಬಿ  ಮಾಡಿದ್ಲು.ಎಲ್ಲಾ  ಗೊಂಬೀಗೂ ಕಣ್ಣೀಗೆ   ನೀಲಿ ಬಣ್ಣಾ ಹಚ್ಚಿದ್ಲು.   ಮನ್ಯಾಗಿನ    ಬಣಬಣ್ಣದ   ಕೌದೀ   ತಂದು   ಅವುಗಳ   ಮ್ಯಾಲೆ ಹೊದಿಸಿದ್ಲು.  ಹೀಂಗ   ಹೋಗಿ   ಹಾಂಗ ಬರೂದರಾಗ   ಎಲ್ಲಾ   ಗೊಂಬೀಗೂ   ಜೀವ   ಬಂದಿತ್ತು.  ಅವಕ್ಕ    ಭಾಷಾ  ಕಲಿಸಿದ್ಲು.  ಉಡಿಗಿ ತೊಡಿಗಿ,   ಹಾಡು, ಕುಣಿತಾ, ರೀತಿ, ಪದ್ಧತಿ ಎಲ್ಲಾ ಕಲಿಸಿದ್ಲು.   ಗಂಡು ಹೆಣ್ಣು    ಜೋಡ್ಯಾಗಿ   ಜೀವನಾ   ಮಾಡ್ರಿ  ಅಂತ   ಕಳಿಸಿ ಕೊಟ್ಲು. ಒಂದು   ಹೆಣ್ಣು   ನನಗ ಜೋಡಿ ಸಿಗಲಿಲ್ಲಾ   ಅಂತು.  ನಾಳೆ ನಿನಗ    ಜೋಡಿ   ಮಾಡ್ತಿನಿ   ನೀ ಈಗ   ಹೋಗು ಅಂತ ಒಂಟಿ   ಹೆಣ್ಣನ್ನ   ಕಳಿಸಿ   ಮಾಯವ್ವ   ಮಲ್ಕೊಂಡ್ಲು.

Life-1

ಮರದಿನಾ   ಮತ್ತ   ಒಂದಿಷ್ಟು ಹೆಣ್ಣು   ಮತ್ತ   ಗಂಡು ಗೊಂಬಿಗೋಳನ್ನ   ಮಾಡಿ   ಬಣಬಣ್ಣದ   ಕೌದಿ   ಹೊದಿಸಿ   ಜೀವಾ   ತುಂಬಿದ್ಲು.ಅವಕ್ಕ  ಬ್ಯಾರೆ    ಭಾಷಾ, ಉಡಿಗಿ ತೊಡಿಗಿ,  ಹಾಡು, ಕುಣಿತಾ, ರೀತಿ, ಪದ್ಧತಿ ಎಲ್ಲಾ ಕಲಿಸಿದ್ಲು.  ಗಂಡು ಹೆಣ್ಣು    ಜೋಡ್ಯಾಗಿ ಜೀವನಾ ಮಾಡ್ರಿ ಅಂತ ಕಳಿಸಿ ಕೊಟ್ಲು.   ಒಂದು ಗಂಡು   ನನಗ ಜೋಡಿಲ್ಲಾ ಅಂತು.   ನಿನ್ನ   ಜೋಡಿ   ಹೆಣ್ಣು ನಿನ್ನೇನೇ   ಮಾಡನಿ, ಆಕಿನ್ನ   ಹುಡಿಕಿ   ಆಕೀ ಜೋಡಿ   ಜೀವನಾ ಮಾಡು  ಅಂದ್ಲು   ಮಾಯವ್ವ.   ಹ್ಯಾಂಗ    ಹುಡುಕ್ಲಿ   ನನಗ ಆ ಮನಸs   ಇಲ್ಲಲ್ಲಾ   ಅಂತು ಒಂಟಿ ಗಂಡು. ಮಾಯವ್ವ   ಅವನ ಮನಸೀಗೆ ಹುಡುಕೋದನ್ನ   ಕಲಿಸಿಕೊಟ್ಲು.   ಈಗ   ಹೋಗಿ    ನಿನ್ನ ಹೆಣ್ಣನ್ನ ಹುಡುಕು ಅಂತ ಕಳಿಸಿಕೊಟ್ಲು.

ಒಂಟಿ   ಗಂಡು   ಹಗಲಿನ್ಯಾಗ   ದಿಕ್ಕು ದಿಕ್ಕು   ತಿರುಗಿದಾ. ರಾತ್ರಿ   ಮುಗಿಲಾಗ ಚಿಕ್ಕಿ ಎಣಿಸಿದಾ.   ಮೀನ ಮೇಷ ಅಂತ ಆಕಾರ ಜೋಡಿಸಿದಾ. ಮಂದಿ   ಕೇಳಿದಾಗ   ಹುಡುಕೋದು    ಬಿಡೋದು ನನ್ನ ಮನಸು ಅಂದ.  ಕಡೀಕೂ   ಒಂಟಿ ಹೆಣ್ಣು   ಒಂದಿನಾ ಸಿಕ್ಕಳು.   ಇಬ್ಬರೂ   ಬ್ಯಾರೆ ಎಲ್ಲಾರ ಹಾಂಗ   ಸಂಸಾರ ಹೂಡಿದರು.   ಆದ್ರ   ಇಬ್ಬರಿಗೂ   ಹೊಂದಲಿಲ್ಲ.   ಜಗಳಾ   ಮಾಡಿ   ಗಂಡು ಮತ್ತ   ಏನೋ   ಹುಡುಕ್ಕೋತ   ಮನಿಯಿಂದ   ಹೊರಗ ಬಿದ್ದ.  ಮತ್ತ    ತಿರುಗಿ   ಬಂದ.   ಮತ್ತ    ಜಗಳ   ಮತ್ತ    ಹೊಂದಾಣಿಕಿ.   ಉಳಿದ   ಮಂದಿ ಎಲ್ಲಾ   ಇವರನ್ನ ನೋಡಿ ನಕ್ಕರು.   ಆಟಕ್ಕ    ಆಟಂತ   ತಾವೂ ಜಗಳಾ   ಆಡಿ   ನೋಡಿದ್ರು.   ಬೇಕನಿಸಿ   ಮತ್ತ   ಮತ್ತ   ಅದ  ಆಟಾ ಆಡಿದ್ರು. ದಿನಾ   ಕಳದ್ವು,  ವಾರ   ಕಳದ್ವು.  ಜಗಳಾಟಾ,   ಹುಡುಕಾಟಾ ಎಲ್ಲಾರಿಗೂ    ಅಂಟಿಕೊಂಡ್ತು.ಜಗತ್ತು ಹುಟ್ಟಿತು.

ಮಾಯವ್ವನ   ಮಾರೀಮ್ಯಾಲೆ   ಸಣ್ಣ ನಗೀ  ಮೂಡಿತು. ಈಗ    ನೆಲದ ಮ್ಯಾಲೆ   ಅವಳದ್ದ s ರಾಜ್ಯ. ಬೆಳಗವ್ವ   ಕೆಂಪವ್ವ   ಮತ್ತೊಂದಿಷ್ಟು  ದೂರ ಸಮುದ್ರದಾಗ   ತಮ್ಮ ಮನೀ   ಮಾಡ್ಯಾರಂತ.

ಕಥೆಯ ಬಗ್ಗೆ:   ಹೋಪಿ   ಎಂಬ   ಅರಿಜೊನಾದ   ಮೂಲನಿವಾಸಿ  ಪಂಗಡ ದ   ಜನರು  ಪ್ರಪಂಚ  ಅಸ್ತಿತ್ವಕ್ಕೆ ಬಂದ  ಬಗೆಗೆ    ಹೇಳುವ   ಒಂದು ಕಥೆ  ಇದರ   ಹಿಂದಿನ   ಮೂಲ   ಸ್ಫೂರ್ತಿ.  ಆದರೆ    ಇದು ಆ ಕಥೆಯ   ನೇರ    ಭಾಷಾಂತರವಲ್ಲ.

ಪುಟ್ಟ ಹಳ್ಳಿಯ ಒಂದು  ಹಸಿರು ಮೈದಾನದ ಮೇಲೆ ಮಕ್ಕಳು  ತಮ್ಮ ಆಟದಲ್ಲಿ ಮಗ್ನರಾಗಿದ್ದರು.  ಎಲ್ಲ ಜೀವಗಳ  ಒಡೆಯ ಮುಖ್ಯಚೇತನ ಅದನ್ನು  ಸಂತೋಷದಿಂದ ನೋಡುತ್ತ ಇದ್ದ. ಇದ್ದಕ್ಕಿದ್ದಂತೆ ಅವನ ಮನಸ್ಸು  ಭವಿಷ್ಯವನ್ನು ಕಂಡು ತಲ್ಲಣಿಸಿತು. ಈ ಎಳೆಯ ಮಕ್ಕಳೆಲ್ಲ ದೊಡ್ಡವರಾಗಿ, ಮುದುಕರಾಗಲಿದ್ದರು. ಅವರ ಚರ್ಮ ಸುಕ್ಕುಗಟ್ಟಿ , ಕಣ್ಣು ಮಂಜಾಗಿ, ಬೆನ್ನು ಬಾಗಿ, ಕುರೂಪಿಗಳಾಗಿ ಕೊನೆಗೆ ಮಣ್ಣಾಗಲಿದ್ದರು. ಈ ಪುಟ್ಟ ಪುಟಾಣಿಗಳು ಭವಿಷ್ಯದಲ್ಲಿ ಕಾಣಲಿರುವ  ದುರ್ದಶೆಯನ್ನು ನೆನೆದು ಮುಖ್ಯಚೇತನ ತುಂಬ ಖಿನ್ನನಾದ. ಹಾಗೆಯೇ  ಮಕ್ಕಳು ಆಡುತ್ತಿರುವ ಹಸಿರು ಮೈದಾನದಲ್ಲಿ ಹೂವಿನ ಗಿಡಗಳಿದ್ದವು. ಚಳಿಗಾಲ ಬರುತ್ತಲೂ ಹೂಗಳು ಬಾಡಿ ಹೋಗಲಿದ್ದವು. ಗಿಡಗಳ ಎಲೆಗಳು ಉದುರಿ ಹೋಗಲಿದ್ದವು. ಇದೆಲ್ಲ ನೆನೆಸಿ ಮುಖ್ಯಚೇತನ ಇನ್ನೂ ಕೊರಗತೊಡಗಿದ.

ಪುಟ್ಟ ಮಕ್ಕಳ ಸಂತೋಷಕ್ಕಾಗಿ ಇನ್ನೂ ಏನಾದರು ಮಾಡಬೇಕೆಂದು ಜೀವಗಳ ಒಡೆಯ ಮುಖ್ಯಚೇತನ ಅಂದುಕೊಂಡ. ತಾನು ಸೃಷ್ಟಿಸಿದ ಆಕಾಶದಿಂದ ಒಂದಿಷ್ಟು  ನೀಲಿ ಬಣ್ಣವನ್ನು ಎರವಲು ಪಡೆದ. ಹಾಗೆಯೆ ಬಿಸಿಲಿನಿಂದ ಹಳದಿ ಬಣ್ಣವನ್ನು , ಎಲೆಗಳಿಂದ ಹಸಿರು ಬಣ್ಣವನ್ನು,, ಹೂಗಳಿಂದ ಕೆಂಪು ಬಣ್ಣವನ್ನು ತೆಗೆದುಕೊಂಡ. ಹೀಗೆ ಹತ್ತಾರು ಬಣ್ಣಗಳನ್ನು  ಒಂದು ಇಂದ್ರಜಾಲ ಚೀಲದಲ್ಲಿ ಒಟ್ಟು ಮಾಡಿದ. ಬಣ್ಣಗಳ ಜೊತೆಗೆ ಹಕ್ಕಿಗಳ ಹಾಡುಗಳನ್ನೂ ಚೀಲದಲ್ಲಿ ಸೇರಿಸಿದ. ಆಮೇಲೆ ಇಂದ್ರಜಾಲ ಚೀಲವನ್ನು ಮಕ್ಕಳಿಗೆ ಕಾಣಿಕೆಯಾಗಿ ನೀಡಿದ.

ಪುಟ್ಟ ಮಕ್ಕಳು ಕುತೂಹಲದಿಂದ ಚೀಲವನ್ನು  ತೆರೆದಾಗ ಅದರಿಂದ ನೂರಾರು ಪಾತರಗಿತ್ತಿಗಳು ಹಾರಾಡುತ್ತ ಹೊರಬಂದವು. ಹಾರಾಡುತ್ತ ಹಾರಾಡುತ್ತ ಹಾಡತೊಡಗಿದವು. ಮಕ್ಕಳಿಗೆ ತುಂಬ ಸಂತೋಷವಾಯಿತು. ಆದರೆ ಪಾತರಗಿತ್ತಿಗಳ ಹಾಡುಗಳನ್ನು ಕೇಳಿ ಹಾಡುವ ಹಕ್ಕಿಗಳಿಗೆ ತುಂಬ ಅಸೂಯೆಯಾಯಿತು. ಅವೆಲ್ಲ  ಮುಖ್ಯಚೇತನದ ಬಳಿಗೆ ಹೋಗಿ  ಜಗತ್ತಿನ ನಿಯಮಗಳನ್ನು  ಗಾಳಿಗೆ ತೂರಿದ ಬಗ್ಗೆ  ದೂರು ಕೊಟ್ಟವು. ಪಾತರಗಿತ್ತಿಗಳು  ಸುಂದರವಾಗಿದ್ದವು ಮತ್ತು ಇಂಪಾಗಿ ಹಾಡುತ್ತಿದ್ದವು. ಇದು ಒಂದು  ಜೀವ ಸಂಕುಲಕ್ಕೆ ಒಂದು ಒಳ್ಳೆಯ ಗುಣವನ್ನು  ಮಾತ್ರ ಕೊಡುವ  ನಿಯಮಕ್ಕೆ  ವಿರುಧ್ಧವಾಗಿದ್ದಿತು. ಮುಖ್ಯಚೇತನ ತನ್ನ ತಪ್ಪನ್ನು ಅರಿತುಕೊಂಡ ಮತ್ತು ಪಾತರಗಿತ್ತಿಗಳಿಂದ ಹಾಡನ್ನು  ಮರಳಿ  ಪಡೆದ. ಆದರೆ ಪಾತರಗಿತ್ತಿಗಳು  ಹಾಡುವುದನ್ನು  ನಿಲ್ಲಿಸಿದರೂ ಹಾರಾಡುವದನ್ನು ನಿಲ್ಲಿಸಲಿಲ್ಲ.

This slideshow requires JavaScript.

ಕ್ಯಾಲಿಫೋರ್ನಿಯಾದ ಹೆದ್ದಾರಿ ೧ ದಕ್ಷಿಣೋತ್ತರವಾಗಿ ಪ್ರಶಾಂತ ಮಹಾಸಾಗರದ ಕಡಲ ಅಂಚನ್ನು ತಬ್ಬಿಕೊಂಡು ಓಡುತ್ತದೆ. ಈ ಹೆದ್ದಾರಿಯ ಮೇಲೆ ಲಾಸ್ ಎಂಜಲೀಸ್ ನಿಂದ ಸುಮಾರು ೨೦೦ ಮೈಲಿ ಉತ್ತರಕ್ಕೆ ಮಹಾಸಾಗರದ ಅಂಚಿಗೆ ಇರುವ ಮೋರೋ ಕಲ್ಲುಬಂಡೆ ನೋಡುಗರ ಕಣ್ಣು ಸೆಳೆಯುತ್ತದೆ. ಸುಮಾರು ೫೭೦ ಅಡಿ ಎತ್ತರ ಇರುವ ಈ ಬಂಡೆಯ ಪೂರ್ವಕ್ಕೆ ಒಂದು ಖಾರಿಯ ಕೊರಳು ಇದೆ. ಇಲ್ಲಿಂದ ಪ್ರಶಾಂತ ಮಹಾಸಾಗರದ ನೀರು ಒಳ ಬಂದರಿಗೆ ಹರಿಯುತ್ತದೆ. ಖಾರಿಯ ಪೂರ್ವದ ಅಂಚಿನಲ್ಲಿ ನಾಲ್ಕಾರು ಸಣ್ಣ ನೀರಿನ ತೊರೆಗಳು ಸಾಗರಕ್ಕೆ ಬಂದು ಸೇರುತ್ತವೆ. ಸಾಗರದ ಉಪ್ಪು ನೀರು ಮತ್ತು ತೊರೆಗಳಿಂದ ಬರುವ ಸಿಹಿ ನೀರು ಖಾರಿಯ ಪೂರ್ವ ಭಾಗದಲ್ಲಿ ಬೆರೆತು ವಿಶಿಷ್ಟ ಜಲ ಪರಿಸರ ನಿರ್ಮಾಣವಾಗಿದೆ. ಖಾರಿಯ ಪಶ್ಚಿಮಕ್ಕೆ ಬಿಳಿಯ ಮರಳಿನ ಕಿರಿದಾದ ರೇವು ಪ್ರದೇಶ ಇದೆ. ಇದು ಖಾರಿಯನ್ನು ಮತ್ತು ಸಾಗರವನ್ನು ಬೇರ್ಪಡಿಸುತ್ತದೆ. ಬಂಡೆಯ ಪೂರ್ವಕ್ಕೆ ಒಂದು ಸಣ್ಣ ಬಂದರು ಮತ್ತು ಅದಕ್ಕೆ ಅಂಟಿಕೊಂಡು ಊರೊಂದು ಚಾಚಿಕೊಂಡಿದೆ. ಬಂಡೆಯಿಂದ ಅಗೆದ ಕಲ್ಲುಗಳಿಂದಲೇ ಬಂದರಿನ ನಿರ್ಮಾಣ ಆಗಿದೆ.

Read More

ಹೊರಗ ದೂರದಾಗ ಮಂದಿ ಹೋಗೋ ಬರೋ ಗುಜು ಗುಜು ಬಿಟ್ಟರ ಬಾಕಿ ಎಲ್ಲಾ ಶಾಂತ ಆಗಿತ್ತು. ಆಂಟೋನಿಯೋ ನ ಮುಖದಾಗ ಮೊದಲಿನ ಜೀವಂತಿಕೆ ಉಳಿದಿರಲಿಲ್ಲ. ಆದರ ಖಿಡಕಿ ಸಳಿ ಹಿಂದ ಇದ್ದ ಇಬ್ಬರೂ ಕುಡಿದಿದ್ದಕ್ಕೋ ಎನೋ ಯಾವ್ದೋ ಆವೇಶದೊಳಗ ಇದ್ದರು. ಮುಖದ ಮ್ಯಾಲೆ ವಿಲಕ್ಷಣ ಭಾವ ಕುಣಿದಾಡತಿತ್ತು. ಗ್ಯಾರಾನ ನೆರಳು ಈಗ ಸಾಕಷ್ಟು ಉದ್ದ ಆಗಿ ಬಾಗಲಾ ದಾಟಿ ಒಳಗ ಬಂದು ಬಿಟ್ಟಿತ್ತು. ಅವನ ಮಾತು ನನ್ನ ಕಿವಿಯ ಹತ್ರ ಬಂದಿತ್ತು.

ಗ್ಯಾರಾನ ನೆರಳು: “ಕುಪೇನ್ಯೋ, ಕ್ವೇಚಾನ, ಕಾಹ್ವಿಲ, ಕೊಕೊಪಾ, ಲುಸಿಯೇನೋ, ತುಲಾರೇ ಎಲ್ಲಾರೂ ಒಂದಾಗಿ ನಿಂತರ ಅಮೇರಿಕನ್ನರನ್ನ ಹೊರಗ ಹಾಕೋದು ಅಂಥಾ ತ್ರಾಸಿನ ಕೆಲಸಾ ಅಲ್ಲ ಅಂತ ನನಗ ನಂಬಿಕಿ ಇತ್ತು. ನಾನು ಕ್ಯಾಲಿಫೊರ್ನಿಯಾದ ಸುಮಾರು ಎಲ್ಲಾ ಪಂಗಡದ ಮುಖಂಡರನ್ನ ಮಾತಾಡಿಸಿ ನನ್ನ ವಿಚಾರ ಹೇಳಿದೆ. ಬಹಳಷ್ಟು ಮುಖಂಡರು ನಾನು ಹೆಳಿದ್ದಕ್ಕ ಒಪ್ಪುವ ಹಾಂಗ ಅನಿಸಿತು. ದಿನಾ ಕಳೆದ ಹಾಂಗ ನನ್ನ ವಿಚಾರಕ್ಕ ನಿಶ್ಚಿತ ರೂಪ ಬಂದಿತು. ಕೊಲೊರಾಡೋ ಮತ್ತು ಹೀಲಾ ನದಿ ಕೂಡುವಲ್ಲಿ ಅಮೇರಿಕನ್ ಸೈನ್ಯದ ಒಂದು ಸಣ್ಣ ಶಿಬಿರ ಇತ್ತು. ಅಲ್ಲಿಂದನೇ ಸ್ಯಾಂಡಿಯೇಗೋ ಮತ್ತು ಲಾಸ್ ಎಂಜಲೀಸ್ನೊಳಗಿನ ಸೈನ್ಯದ ತುಕಡಿಗಳಿಗೆ ಎಲ್ಲಾ ಸಾಮಾನು ಪೂರೈಕೆ ಆಗತಿತ್ತು. ಆ ಶಿಬಿರ ನಮ್ಮ ಕೈಗೆ ಹತ್ತಿದರ ಕ್ಯಾಲಿಫೊರ್ನಿಯಾದ ಅಮೇರಿಕನ್ ಸೈನಿಕರಿಗೆ ಸಾಮಾನಿನ ಪೂರೈಕೆ ನಿಂತು ಹೋಗತಿತ್ತು. ಆಮ್ಯಾಲೆ ಸ್ಯಾಂಡಿಯೇಗೋ ಮತ್ತು ಲಾಸ್ ಎಂಜಲೀಸ್ ಮ್ಯಾಲೆ ಬಿದ್ದರ ಗೆಲ್ಲೋದು ಸುಲಭ ಆಗತಿತ್ತು. ಅದಕ್ಕೆ ಕೊಲೊರಾಡೋ ನದೀ ದಂಡಿಯ ಕ್ವೆಚಾನ, ಕಾಮಿಯಾ ಮತ್ತು ಕೊಕೊಪಾ ಪಂಗಡಗಳನ್ನ ನೋಡಿ ಮಾತುಕಥೀ ಮಾಡ್ಲಿಕ್ಕೆ ನಾನು ಹೋದೆ.”
Read More

ಆಂಟೋನಿಯೋ: “ಹುಚ್ಚರ ಹಾಂಗ ಮಾತಾಡಬ್ಯಾಡಾ. ಒಕ್ಕಲುತನಾ ನಿಮಗಂತೂ ಬೇಕಿರಲಿಲ್ಲ. ಮತ್ತ ನಾವು ಏನು ಮಾಡಬೇಕಿತ್ತು? ಜಮೀನಿನ ಮ್ಯಾಲೆ ಇದ್ದ ದನಾ ಕರಾ ಎಲ್ಲಾವನ್ನು ಹಸಿವಿನಿಂದ ಸಾಯಲಿಕ್ಕೆ ಬಿಡಬೇಕಿತ್ತೇನು? ಭಂಗಾರದಂಥಾ ಜಮೀನಿನಮ್ಯಾಲೆ ಕಸಾ ಕಡ್ಡಿ ಬೆಳಿಯಲಿಕ್ಕೆ ಬಿಟ್ಟು ನಿಮ್ಮ ಹಿಂದ ಬ್ಯಾಟಿ ಆಡಲಿಕ್ಕೆ ಬರಬೇಕಿತ್ತೇನು? ”

ಗ್ಯಾರಾನ ನೆರಳು: “ಮನಸ್ಸಿನ ಬ್ಯಾಸರಕ್ಕ ಅಂತ ನೀವು ಬ್ಯಾಟಿ ಆಡ್ತೀರಲ್ಲ? ಮತ್ತ ಹೊಟ್ಟೀಗೆ ಎಷ್ಟು ಬೇಕೋ ಅಷ್ಟು ಬ್ಯಾಟಿ ಆಡೂದರಾಗ ಸಣ್ಣತನಾ ಏನದ? ”

ಆಂಟೋನಿಯೋ: “ನೀನು ಕುಪೆನ್ಯೋ ಪಂಗಡದ ಮುಖಂಡ. ಸ್ಪ್ಯಾನಿಶ್, ಲ್ಯಾಟಿನ್ ಓದಿಕೊಂಡಾಂವಾ. ಇತಿಹಾಸ ತಿಳಿದಾಂವಾ. ಕಾಲಚಕ್ರ ಉಲ್ಟಾ ತಿರುಗುದಿಲ್ಲ ತಮ್ಮಾ. ಬ್ಯಾಟಿ ಆಡಿ ಜೀವನಾ ಮಾಡೋ ಪಧ್ಧತಿ ಈಗಿನ ಕಾಲಕ್ಕ ನಡಿಯೂದಿಲ್ಲ.”

ಗ್ಯಾರಾನ ನೆರಳು: “ಆದರ ಭೂಮಿ ನುಂಗಿ ಅದರ ಮ್ಯಾಲೆ ಜೀವನಾ ಮಾಡೂದು ನಡೀತದೇನು?”
Read More

ಸ್ಯಾಂಡಿಯೇಗೋದ ಒಂದು ಭಾಗದೊಳಗ ಹತ್ತೊಂಬತ್ತನೇ ಮಧ್ಯಕಾಲದ ಸುಮಾರಿಗೆ ಕಟ್ಟಿದ ಒಂದಿಷ್ಟು ಕಟ್ಟಡ ಅವ. ಕಟ್ಟಡಗಳ ನಡುವ ಒಂದು ದೊಡ್ಡ ಆಯಾಕಾರದ ಪ್ರಾಂಗಣ, ಅದರ ನಡುವ ಝೇಂಡಾ ಹಾರಿಸಲಿಕ್ಕೆ ಅಂತ ಒಂದು ಎತ್ತರ ಖಂಬ ಅದ. ಆಗಿನ ಪ್ರವಾಸಿಗಳಿಗೆ ಇಳಕೊಳ್ಳಲಿಕ್ಕೆ ಅಂತ ವಠಾರ, ಕುದುರೀ ಗಾಡೀ ನಿಲ್ಲಿಸಲಿಕ್ಕೆ ಅಂತ ಒಂದು ಲಾಯ, ಎರಡು ಖೋಲಿಯ ಕೋರ್ಟ್, ಎರಡು ಕಿರಾಣಿ ಅಂಗಡಿ, ಒಂದು ಮಿಠಾಯಿ ಅಂಗಡಿ, ಒಂದು ತಂಬಾಕು ಮಾರುವ ಅಂಗಡಿ, ಒಂದು ಶರೇದ ಅಂಗಡಿ, ಒಂದು ಖೋಲಿಯ ಸಾಲಿ, ನಾಲ್ಕೈದು ಸ್ಥಿತಿವಂತರ ಮನಿಗೋಳು, ಅವುಗಳ ಹಿಂದ ಒಂದಿಷ್ಟು ಜನಸಾಮಾನ್ಯರ ಮನೀ, ಹಿಂಗ ಸುಮಾರು ಇಪ್ಪತ್ತರಿಂದ ಮೂವತ್ತು ಕಟ್ಟಡ ಅಲ್ಲಿ ಅವ. ಪ್ರಾಂಗಣದ ನಡುವ ಝೇಂಡಾ ಖಂಬದ ಬಾಜೂಕ ಎಡಕ ಬಲಕ ಎರಡು ತೋಫು ಹಾರಿಸೋ ಗಾಡಿ ಕಾಣಿಸ್ತಾವ. ಪ್ರಾಂಗಣದ ನಡುವ ನಿಂತರ ಸುಮಾರು ಒಂದೆರಡು ಮೈಲಿ ದೂರ ಇರೋ ಸ್ಯಾಂಡಿಯೇಗೋ ಮಿಷನ್ ನ ಬಿಳೀ ಗೋಪುರ, ಅದರೊಳಗಿನ ದೊಡ್ಡ ಘಂಟೀ ಕಾಣಿಸ್ತಾವ. ಪ್ರಾಂಗಣದ ಒಂದು ಸುತ್ತು ಹಾಕಿದರ ಆಗಿನ ಕಾಲಕ್ಕ ಸ್ಯಾಂಡಿಯೇಗೋ ಹ್ಯಾಂಗ ಇದ್ದಿರಬಹುದು ಅನ್ನುವ ಕಲ್ಪನಾ ಬರ್ತದ.
Read More

ಅಸಂಗತ ನಾಟಕಗಳ ವಿಷಯ ವಸ್ತು ಹೆಚ್ಚಾಗಿ ಅಮೂರ್ತವಾಗಿರುತ್ತದೆ. ಮಾನವ  ಬದುಕಿನ ಹೋರಾಟ, ಆತಂಕ, ತುಮುಲ, ಪರಿವರ್ತನೆಗಳೊಡನೆ ಹೊಂದಾಣಿಕೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಮತ್ತು ಅಸಹಾಯಕತೆ ಇಂಥ ವಿಷಯಗಳನ್ನು ಅಸಂಗತ ಶೈಲಿ ಬಹಳ  ಪರಿಣಾಮಕಾರಿಯಾಗಿ  ಪ್ರೇಕ್ಷಕರ ಎದುರು ಇಡಬಲ್ಲದು. ಇದಕ್ಕೆ  ಒಂದು ಮುಖ್ಯ ಕಾರಣ  ಎಂದರೆ ಈ ಶೈಲಿ ನಾಟಕದ ವಿಷಯ ವಸ್ತು ಮತ್ತು ನಾಟಕದ ರೂಪ ಇವುಗಳಲ್ಲಿ ಐಕ್ಯತೆಯನ್ನು  ಸಾಧಿಸುತ್ತದೆ. ಸಾಂಪ್ರದಾಯಿಕ ಶೈಲಿಯ ನಾಟಕಗಳು ತಮ್ಮ ಪಾತ್ರಗಳ ಮೂಲಕ  ವಿಷಯ ವಸ್ತುವಿನ ಬಗ್ಗೆ  ಮಾತನಾಡುತ್ತವೆ. ಆದರೆ ನಾಟಕದ ರೂಪ ಮತ್ತು ವಿಷಯ ಇವು ಬೇರೆ ಬೇರೆಯಾಗಿಯೇ ಉಳಿದುಬಿಡುತ್ತವೆ.
Read More

Design a site like this with WordPress.com
ಪ್ರಾರಂಭಿಸಿ